ಕಲ್ಯಾಣ ಕಾವ್ಯ: ಕಡತಗಳಲ್ಲಿ ಜೀವಂತ ಮನುಷ್ಯರ ಹುಡುಕುತ್ತ…… ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಕಡತಗಳಲ್ಲಿ ಜೀವಂತ ಮನುಷ್ಯರ ಹುಡುಕುತ್ತ……

ಮುಕ್ಕಣ್ಣ ಕರಿಗಾರ

ಇರಲಿಲ್ಲ ಎರಡುದಿನ ಕಛೇರಿಯಲ್ಲಿ
ಕಾಯ್ದಿದ್ದವು ಇಷ್ಟೊಂದು ಕಡತಗಳು ನನಗಾಗಿ!
ಜನರು ಕಾಯ್ದು ಬೇಸರಿಸಿಕೊಂಡುಹೋಗಬಹುದು
ನಾಳೆ ಬಂದರಾಯಿತು ಎಂದು.
ಆದರೆ ಕಡತಗಳ ಕಥೆ ಹಾಗಲ್ಲ
ನನ್ನ ಸಹಿಯೋ ,ಒಕ್ಕಣೆಯೋ
ಅಭಿಪ್ರಾಯವೋ ಇಲ್ಲದೆ
ಮುಂದೆ ಸಾಗುವುದಿಲ್ಲ ಅವು.
ಹಿಂದೆಯೂ ಹೋಗುವುದಿಲ್ಲ ಅವು.
ಕುಳಿತೇ ಇರುತ್ತವೆ ನನ್ನ ಟೇಬಲ್ಲಿನ ಮೇಲೆ.
ಕೆಳಗಿನವರು ತಲೆಬಿಸಿಮಾಡಿಕೊಳ್ಳದೆ
‘ ಅವರಿಷ್ಟ,ಏನಾದರೂ ಮಾಡಿಕೊಳ್ಳಲಿ’
ಎಂದು ಸಾಗು ಹಾಕಿರುತ್ತಾರೆ
ಮೇಲಿನವರು ನಾನು ಏನು ಬರೆದಿದ್ದೇನೆ
ಎನ್ನುವುದನ್ನು ನೋಡಿ
ನಿರ್ಧರಿಸುತ್ತಾರೆ ಕಡತಗಳ ಗತಿಯನ್ನು.
‘ ಕೆಳಗಿನವರು’ ಮತ್ತು’ ಮೇಲಿವರ’ ನಡುವಿನ
ನನ್ನ ಸ್ಥಿತಿ ?
ಕೆಳಗಿನವರಿಗೆ
ಬರಿ ಕಡತಗಳು ಕಾಣಿಸುತ್ತವೆ
ಮೇಲಿನವರಿಗೆ ನಿಯಮಗಳು ಕಾಣಿಸುತ್ತವೆ
ಇವರಿಬ್ಬರ ನಡುವೆ ನಾನು
ಹುಡುಕುತ್ತೇನೆ ಪ್ರತಿಕಡತದಲ್ಲಿ
ಜೀವಂತ ಮನುಷ್ಯರನ್ನು!
ಪ್ರತಿ ಕಡತದಲ್ಲಿ ಇರುತ್ತಾರೆ ಜೀವಂತ ಮನುಷ್ಯರು!
ಕಡತ ಸಾಗುಹಾಕುವುದಕ್ಕಿಂತ
ಕಡತ ಹೇಳುವ ಕಥೆ
ಕೇಳಬೇಕು ಎನಿಸುತ್ತದೆ
ಮೈಯೆಲ್ಲ ಕಿವಿಯಾಗಿ
ಆಲಿಸುತ್ತೇನೆ ಕಡತ ಹೇಳುವ ಕಥೆಗಳನ್ನು
ಕಣ್ತೆರೆದು ನೋಡುತ್ತೇನೆ
ಕಡತಗಳಲ್ಲಿ ಹುದುಗಿದ ಜೀವಂತ ಮನುಷ್ಯರ
ಬದುಕು ಬವಣೆಗಳನ್ನು.
ಕಡತಗಳಲ್ಲಿ ಜೀವಂತ ಮನುಷ್ಯರು
ಎದ್ದು ಮಾತನಾಡುತ್ತಾರೆ
ಹೇಳಿಕೊಳ್ಳುತ್ತಾರೆ ಮನ ಬಿಚ್ಚಿ ತಮ್ಮ ಕಷ್ಟ ಸುಖ
ಮತ್ತೆ ಕೆಲವರು ಅಂಗಲಾಚುತ್ತಾರೆ
‘ ಆಸರೆಯಾಗಿ ಬದುಕು ಕಟ್ಟಿಕೊಳ್ಳಲು’ ಎಂದು.
ಕೆಲವರು ಕೇಳುತ್ತಾರೆ ನೆರವು-ಪರಿಹಾರ.
ಮತ್ತೆ ಕೆಲವು ಕಡತಗಳಲ್ಲಿ
ದಾಖಲಾಗಿರುತ್ತವೆ ಸರಕಾರಿ ಕಛೇರಿಗಳನ್ನು
ದುಡ್ಡುಮಾಡುವ ದಂಧೆಯನ್ನಾಗಿಸಿಕೊಂಡ
ಧೂರ್ತರ ಸ್ವಾರ್ಥ,ದುರ್ಬುದ್ಧಿ,ದುರಾಗ್ರಹಗಳು.
ಕೆಳಗಿನವರಿಗೆ ಅರ್ಥವಾಗದ
ಮೇಲಿನವರಿಗೆ ವಿಲೆಯಾಗಬೇಕಾದ
ಕಡತಗಳು ನನ್ನನ್ನು ಕಾಡುತ್ತವೆ,ಪೀಡಿಸುತ್ತವೆ
ಒಮ್ಮೆಮ್ಮೆ ತರಿಸುತ್ತವೆ ಕಣ್ಣೀರನ್ನು ಸಹ
ಕಡತ ವಿಲೆ ಮಾಡುವುದರತ್ತ ಅಲ್ಲ
ನನ್ನ ಲಕ್ಷ್ಯ
ಕಡತದೊಳು ಹುದುಗಿದ ಮನುಷ್ಯರ
ಭಾವನೆಗಳನ್ನು ಅರ್ಥ ಮಾಡಿಕೊಂಡು
ನೀಡಬೇಕಾಗಿರುತ್ತದೆ ಅಂಥವರ
ಬದುಕುಗಳಿಗೆ ಅರ್ಥ,ಮಹತ್ವ.
ಈ ಕಾರಣದಿಂದ ಕಡತಗಳೊಂದಿಗೆ
ಮಾತನಾಡುತ್ತೇನೆ.
ಕಡತಗಳನ್ನು ವಿಲೆ ಮಾಡುವುದಿಲ್ಲ ನಾನು
ಕಡತಗಳಲ್ಲಿರುವ ಜೀವಂತ ಮನುಷ್ಯರ
ನೋವು,ನಿಟ್ಟುಸಿರುಗಳ
ಅರ್ಥೈಸಿಕೊಂಡು ಭರವಸೆಯಾಗಬಯಸುವೆ
ನಿರ್ಜೀವ ಕಡತಗಳಲ್ಲಡಗಿಕೊಂಡು ಕುಳಿತವರ ಬಾಳುಗಳಿಗೆ.
ಬೆಳಕಾಗದಿದ್ದರೂ ಸರಿಯೆ
ಆಸರೆ ಆದರೆ ಸಾಕೆಂಬ
ಸಂತೃಪ್ತಿಯಲ್ಲಿ ಹುಡುಕುತ್ತೇನೆ
ಪ್ರತಿ ಕಡತದ ಹಿಂದಿರುವ ಜೀವಂತ ಮನುಷ್ಯರನ್ನು
ಆಸೆ ಕನಸುಗಳ ಹೊತ್ತ ಬಲಹೀನರುಗಳನ್ನು.
ನನ್ನ ಒಕ್ಕಣೆ ಬಲತುಂಬಲಿ
ದುರ್ಬಲರ ಬಾಳುಗಳಿಗೆ
ನನ್ನ ಅಭಿಪ್ರಾಯ
ಅರಳಿಸಲಿ ಕಮರಿಹೋದ ಬಾಳುಗಳ
ನನ್ನ ಒಕ್ಕಣೆಯು
ದುಃಖಿತರ ಬದುಕುಗಳಿಗೆ
ಸಮಾಧಾನ ನೀಡಲಿ
ಜೀವರುಗಳಲ್ಲಿ ದೇವರೆ ನಿನ್ನನ್ನು ಕಾಣುವ ದೃಷ್ಟಿ ನೀಡು
ಎಂದು ದೇವರನ್ನು ಬೇಡುತ್ತ

ಕಡತಗಳಲ್ಲಿ ಕಣ್ಣಿಟ್ಟು ನೋಡುತ್ತೇನೆ
ಕಡತಗಳನ್ನು ಮಾತನಾಡಿಸುತ್ತೇನೆ.

20.09.2021