ರಾಯಚೂರು ಜಿಲ್ಲೆಯ ನೀರಾವರಿ, ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ:ತುಂಗಭದ್ರಾ , ಕೃಷ್ಣಾ ನದಿ ಜೋಡಣೆಯ ಮಹತ್ವ

ರಾಯಚೂರು ಜಿಲ್ಲೆಯ ನೀರಾವರಿ, ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ:ತುಂಗಭದ್ರಾ , ಕೃಷ್ಣಾ ನದಿ ಜೋಡಣೆಯ ಮಹತ್ವ

 ಲೇಖಕ: ಬಸವರಾಜ ಭೋಗಾವತಿ

ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುವ ರಾಯಚೂರು ಜಿಲ್ಲೆ ಸಂಪನ್ಮೂಲಗಳನ್ನು ಹೊಂದಿದ ಸಂಪದ್ಭರಿತ ಪ್ರದೇಶ. ಆದರೂ ಜಿಲ್ಲೆಯ ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿರುವುದು ವಿಷಾದನೀಯ ಸಂಗತಿ. ಪ್ರತಿ ವರ್ಷ ನೆರೆ, ಬರ ಈ ಭಾಗದ ಜನರನ್ನು ಶಾಪದಂತೆ ಕಾಡುತ್ತಿವೆ. ಪ್ರತಿ ಬೇಸಿಗೆಯಲ್ಲಿ ಜಿಲ್ಲೆಯ ಹಲವು ಕಡೆ ಕುಡಿಯುವ ನೀರಿಗೂ ತತ್ವಾರ ಸಾಮಾನ್ಯ. ಜಿಲ್ಲೆಯ ಬಗ್ಗೆ ಇದುವರೆಗೆ ಆಳಿದ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣ. ತುಂಗಭದ್ರಾ ಎಡದಂಡೆ ನಾಲೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳು ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ಕಾಲುವೆ ನೀರಿಗಾಗಿ ಟೇಲೆಂಡ್ (ಕೊನೆಭಾಗದ) ರೈತರ ಗೋಳು ಪ್ರತಿ ವರ್ಷದ ಸಮಸ್ಯೆ. ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಭಾಗದಲ್ಲಿ ಸುಮಾರು 2ಲಕ್ಷ ಎಕರೆ ಅನಧಿಕೃತ ನೀರಾವರಿ, ಜಲಸಂಪನ್ಮೂಲ ಇಲಾಖೆಯಲ್ಲಿ ಹುದ್ದೆಗಳ ಕೊರತೆಯಿಂದಾಗಿ ಅಸಮರ್ಪಕ ನೀರು ನಿರ್ವಹಣೆ ಕಾಲುವೆ ಕೊನೆಭಾಗದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಪುರಾತನ ಕೆರೆಗಳ ಜೀರ್ಣೋದ್ಧಾರ ಹಾಗೂ ಹೊಸದಾಗಿ ಕೆರೆಗಳ ನಿರ್ಮಾಣದಲ್ಲಿನ ಹಿಂದುಳಿಯುವಿಕೆ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವಂತೆ ಮಾಡುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಮಸ್ಯೆಯಿಂದ 30ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಕಾರಣ ಕೊಪ್ಪಳ ಜಿಲ್ಲೆ ನವಲಿ ಬಳಿ ಸುಮಾರು 32ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಈಗಿರುವ ರಾಜ್ಯ ಸರ್ಕಾರ (ನಿಕಟಪೂರ್ವ ಸಿಎಂ ಬಿ.ಎಸ್.ವೈ ಅವಧಿಯಲ್ಲಿ)  ರೂ.20ಕೋಟಿ ಮಂಜೂರು ಮಾಡಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣವಾದರೆ ರಾಯಚೂರು ಜಿಲ್ಲೆಗೆ ಸಮರ್ಪಕವಾಗಿ ಕಾಲುವೆ ನೀರು ಪೂರೈಸಲು ಸಾಧ್ಯ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಇನ್ನಿತರ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳ ಬಗ್ಗೆ ಈಚೆಗೆ ಹೆಚ್ಚು ಚಿಂತನೆ ನಡೆಯುತ್ತಿರುವುದು ಹೊಸ ಬೆಳವಣಿಗೆ. ಜಿಲ್ಲೆಯ ರೈತ ಮುಖಂಡರು, ನೀರಾವರಿ ತಜ್ಞರು ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಜೋಡಣೆಯಿಂದ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಸೌಲಭ್ಯ ಹೊಂದಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಜೋಡಣೆ ಯೋಜನೆ ಜಾರಿಗೆ ದಶಕಗಳ ಅವಧಿ ಬೇಕಾಗಬಹುದು. ಆದರೆ ಈ ನಿಟ್ಟಿನಲ್ಲಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪ್ರಸ್ತಾಪ, ಚರ್ಚೆಗಳು ನಡೆಯುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ.
ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ನವಲಿ ಸಮಾನಾಂತರ ಜಲಾಶಯ ಪರ್ಯಾಯ ಕ್ರಮವಾದರೆ, ಕೃಷ್ಣಾ ನದಿ ನೀರಿನ ಬಳಕೆಗೆ ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆ ಆಲೋಚಿಸುವುದು ಕೂಡ ಅಗತ್ಯವಾಗಿದೆ.
ಪ್ರತಿ ವರ್ಷ ನೆರೆಹಾವಳಿ ಸಂದರ್ಭದಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಂದ ಅಪಾರ ಪ್ರಮಾಣದ ನೀರು ಜಿಲ್ಲೆಯ ಮೂಲಕ ಆಂಧ್ರಪ್ರದೇಶದ ಕಡೆ ಹರಿಯುವುದನ್ನು ನೋಡುತ್ತಿದ್ದೇವೆ. ಈ ಹೆಚ್ಚುವರಿ ನೀರನ್ನು ನಮ್ಮಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸದಿರುವುದು ಜಿಲ್ಲೆಯ ಬಗ್ಗೆ ಸರ್ಕಾರಗಳ ಉದಾಸೀನ ಭಾವನೆಗೆ ಸಾಕ್ಷಿಯಾಗಿದೆ. ಕಾರಣ ಎರಡು ನದಿಗಳನ್ನು ಜೋಡಿಸುವ ಮೂಲಕ ನೀರಾವರಿರಹಿತ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಪ್ರತಿಪಾದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತುಂಗಭದ್ರಾ ನದಿ ನೀರಿನ ಜತೆಗೆ ಅಧಿಕ ಪ್ರಮಾಣದಲ್ಲಿ ತುಂಬಿ ಹರಿಯುವ ಕೃಷ್ಣಾ ನದಿ ನೀರಿನ ಸಮರ್ಪಕ ಬಳಕೆ ಬಗ್ಗೆ ಯೋಚಿಸಬೇಕಾಗಿದೆ.
ಕೃಷ್ಣಾ ನದಿಗೆ ಸಂಬಂಧಿಸಿದಂತೆ 1976ರಲ್ಲಿ ಬಚಾವತ್ ಆಯೋಗದ ತೀರ್ಪು, 2010ರಲ್ಲಿ ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪು ಹಾಗೂ 2013ರಲ್ಲಿ ಕೃಷ್ಣಾ ನ್ಯಾಯಾಧೀಕರಣದ ಸ್ಪಷ್ಟತಾ ತೀಪುಗಳು ಅನ್ವಯ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು 911ಟಿಎಂಸಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನಿಧಾನಗತಿ ಅನುಸರಿಸಿರುವುದು ಸ್ಪಷ್ಟವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಯುಕೆಪಿ1 ಮತ್ತು 2ರ ಅಡಿಯಲ್ಲಿ 15.42ಲಕ್ಷ ಎಕರೆ ಹಾಗೂ ಯುಕೆಪಿ-3ರ ಅಡಿಯಲ್ಲಿ 13.10ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿದೆ. ಆದರೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಧಿಸೂಚನೆಯೊಂದಿಗೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಪೂರ್ಣಗೊಳಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ. 2013ರ ಕೃಷ್ಣಾ ನ್ಯಾಯಾಧೀಕರಣದ ಸ್ಪಷ್ಟತಾ ತೀರ್ಪಿನ ಪ್ರಕಾರ 519ಮೀಟರ್ ಎತ್ತರ ಇರುವ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.56 ಮೀಟರ್ ಗೆ ಹೆಚ್ಚಿಸಬೇಕಿದೆ. ಪ್ರಸ್ತುತ 123.8ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಾದರೆ ಸುಮಾರು 100 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹಿಸಲು ಸಾಧ್ಯ ಎಂದು ಅಂದಾಜಿಸಲಾಗಿದೆ. ಈ 100 ಟಿಎಂಸಿ ನೀರಿನಿಂದ ನಮ್ಮ ಭಾಗದ ಮತ್ತಷ್ಟು ಪ್ರದೇಶ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯ. ಆಲಮಟ್ಟಿಯ ಅಣೆಕಟ್ಟು ಎತ್ತರ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಬೇಕಿದೆ. ನ್ಯಾಯಯುತವಾಗಿ ರಾಜ್ಯಕ್ಕೆ ಸಿಗುವ ಕೃಷ್ಣಾ ನದಿ ನೀರಿನ ಬಳಕೆಯಿಂದ ರಾಯಚೂರು ಸೇರಿದಂತೆ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳು ಸಮಗ್ರ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯ. ರಾಜ್ಯದಲ್ಲಿ ಕೃಷ್ಣಾ ನದಿ ನೀರಿನ ಹಂಚಿಕೆಯ ಪ್ರಮಾಣ 911ಟಿಎಂಸಿ ಹಾಗೂ ಕಾವೇರಿ ನದಿ ನೀರಿನ ಹಂಚಿಕೆ ಪ್ರಮಾಣ 284.75 ಟಿಎಂಸಿ. ಆದರೆ ರಾಜ್ಯವನ್ನಾಳಿದ ಸರ್ಕಾರಗಳು ಕಾವೇರಿ ನದಿ ನೀರು ಬಳಕೆ ವಿಚಾರದಲ್ಲಿ ನೀಡಿದ ಪ್ರಾಮುಖ್ಯತೆ , ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಹಂಚಿಕೆಯಾಗಿರುವ ಕೃಷ್ಣಾ ನದಿ ನೀರಿನ ಬಳಕೆಗೆ ನೀಡದಿರುವುದು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ. ಕಾವೇರಿ ನದಿ ನೀರಿನ ಸಮಸ್ಯೆಯನ್ನು ಇಡೀ ರಾಜ್ಯದ ಸಮಸ್ಯೆ ಎಂಬಂತೆ ಹಲವಾರು ಬಾರಿ ಬಿಂಬಿಸಲಾಗಿದೆ.
ಕಾರಣ ಕೃಷ್ಣಾ ನದಿಯ 911ಟಿಎಂಸಿ ಪ್ರಮಾಣದ ನೀರಿನ ಸಂಪೂರ್ಣ ಬಳಕೆ ಹಾಗೂ ತುಂಗಭದ್ರಾ ನದಿ ಜತೆ ಜೋಡಣೆ ಜಿಲ್ಲೆಯ ಸಮಗ್ರ ನೀರಾವರಿಗೆ ಸೂಕ್ತ ಎಂಬುದು ತಜ್ಞರ ಅನಿಸಿಕೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ತಜ್ಞರು, ಸಂಘ ಸಂಸ್ಥೆಗಳ ಮುಖಂಡರು ಸಂಘಟಿತ ಪ್ರಯತ್ನ ನಡೆಸುವುದು ಅಗತ್ಯವಾಗಿದೆ.