ರಾಯಚೂರು ಸೆ.19: ರಾಯಚೂರು ನಗರದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದ್ದ ವಿವಿಧ ಜನಪರ ಸಂಘಟನೆಗಳ 16ಜನ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಎಸ್.ಎಫ್.ಐ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ. ಭಾನುವಾರ ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಸರಣಿ ಅತ್ಯಾಚಾರ, ಕೊಲೆ, ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ರಾಯಚೂರು ನಗರದಲ್ಲಿ ಸೆ.16ರಂದು ಭೀಮ್ ಆರ್ಮಿ, ಅಬ್ದಲ್ ಕಲಾಂ ಸಂಘಟನೆ, ಇತರ ಸಂಘಟನೆಗಳ ನೇತೃತ್ವದಲ್ಲಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹೋರಾಟ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿಫಲವಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಲಾಗಿತ್ತು ಹಾಗೂ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಲಾಗಿತ್ತು. ಆದರೆ ರಾಯಚೂರು ನಗರದ ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಜಿಲ್ಲಾಧಿಕಾರಿಗಳ ಪ್ರಭಾವದಿಂದ, ಉದ್ದೇಶ ಪೂರ್ವಕವಾಗಿ 16ಜನ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಸಲುವಾಗಿ, ಉದ್ದೇಶ ಪೂರ್ವಕವಾಗಿ ದಾಖಲಿಸಿರುವ ಈ ಪ್ರಕರಣವನ್ನು ವಾಪಸ್ ಪಡೆದು ಜಿಲ್ಲಾಧಿಕಾರಿ, ರಾಯಚೂರು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಹೋರಾಟಗಾರರ ಬಳಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ಕುಮಾರ್, ಮುಖಂಡರಾದ ರಮೇಶ ರಾಮನಾಳ, ಸಂತೋಷ, ಶಕ್ತಿ ನಗರ ಸೈಯದ್ ಅಸ್ರಫ್ ಅಲಿ, ದೀಪಕ್ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು.