ಪರಶಿವ ತತ್ತ್ವ ಸ್ವರೂಪಿ — ಶಂಕರಲಿಂಗೇಶ್ವರ

ಲೇಖಕರು: ಮುಕ್ಕಣ್ಣ ಕರಿಗಾರ

ಶಿವನು ಸಾಕಾರನೂ ಹೌದು,ನಿರಾಕಾರನೂ ಹೌದು.ನಿರಾಕಾರ ಶಿವನು ಪರಬ್ರಹ್ಮ ಇಲ್ಲವೆ ಪರಶಿವನಾಗಿದ್ದರೆ ಹರ,ಶಂಕರ,ಉಮಾಪತಿ ,ಕೈಲಾಸಪತಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಶಿವನು ಸಾಕಾರ ಶಿವ.ಮೂಲತಃ ಶಿವನು ನಿರಾಕಾರ ಪರಬ್ರಹ್ಮನಿದ್ದು ವಿಶ್ವಸೃಷ್ಟಿಯ ಲೀಲೆಗೋಸ್ಕರ ಪಾರ್ವತಿಪತಿಯಾಗಿ ಆಕಾರಗೊಂಡು ಲೀಲೆ ನಟಿಸುವನು.ಶಿವನ ಮೂಲಪರಬ್ರಹ್ಮ ತತ್ತ್ವ ಮತ್ತು ಲೀಲೆಯ ಉಮಾಪತಿ ತತ್ತ್ವಗಳೆರಡರ ಪ್ರತೀಕವೇ ” ಶಂಕರಲಿಂಗ”.

ದೇಶದ ಅಲ್ಲಲ್ಲಿ ಶಂಕರಲಿಂಗ ದೇವಸ್ಥಾನಗಳಿವೆ.ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನಲ್ಲಿ ಪುರಾತನ ಶಂಕರಲಿಂಗೇಶ್ವರ ದೇವಸ್ಥಾನ ಇರುವುದು ವಿಶೇಷ.ಜೈಗ್ರಾಮ ಗ್ರಾಮ ಪಂಚಾಯತಿಯ ಇಡ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವುದರಿಂದ ಇದನ್ನು ‘ ಇಡ್ಲೂರು ಶಂಕರಲಿಂಗೇಶ್ವರ ದೇವಸ್ಥಾನ’ಎಂದು ಕರೆಯುತ್ತಾರೆ.ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ದಿನವಾದ ಮೊನ್ನೆ ಅಂದರೆ ೧೭.೦೯.೨೦೨೧ ರಂದು ನಾನು ಅನಿರೀಕ್ಷಿತವಾಗಿ ಇಡ್ಲೂರು ಶಂಕರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದೆ.ಕೊವಿಡ್ ಲಸಿಕಾ ಮೇಳದ ಉಸ್ತುವಾರಿ ಅಧಿಕಾರಿಯಾಗಿ ಅಜಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದಾಗ ಇಡ್ಲೂರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದೆ.ಇಡ್ಲೂರು ಎಂದ ಕೂಡಲೆ ಎಲ್ಲೋ ಓದಿದ್ದ ‘ ಇಡ್ಲೂರಿನ ಶಂಕರಲಿಂಗೇಶ್ವರ’ ದೇವರ ನೆನಪಾಯಿತು.ಇಡ್ಲೂರು ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಸಿದ್ದಪ್ಪ ಸ್ವಾಮಿಯವರನ್ನು ದೇವಸ್ಥಾನ ತೋರಿಸಲು ತಿಳಿಸಿದೆ.ಅವರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವಸ್ಥಾನದ ಅರ್ಚಕರು,ಆಡಳಿತ ಮಂಡಳಿಯವರಿಗೆ ನನ್ನನ್ನು ಪರಿಚಯ ಮಾಡಿಸಿ ಅವರುಗಳಿಗೆ ಗೊತ್ತಿದ್ದ ಮಾಹಿತಿಯನ್ನು ಕೊಡಿಸಿದರು.ದೇವಸ್ಥಾನದ ಅರ್ಚಕ ಸಂಗಮೇಶ ಸ್ವಾಮಿ ಅವರು ಕೆಲವು ಪ್ರಾಥಮಿಕ ಮಾಹಿತಿ ನೀಡಿ,ದೇವಸ್ಥಾನದ ಒಳ ಹೊರಗೆ ಸುತ್ತಾಡಿಸಿ,ಕ್ಷೇತ್ರ ಮಹಾತ್ಮೆಯನ್ನು ಸಾರಿದರು.

ಶಂಕರಲಿಂಗ ಉದ್ಭವದೇವರಾಗಿದ್ದು ಮನುಷ್ಯರಾರೂ ಪ್ರತಿಷ್ಠೆ ಮಾಡದ ಲಿಂಗವಾಗಿದ್ದು ಸಾವಿರಾರು ವರ್ಷಗಳ ಇತಿಹಾಸವಿದೆ.ಈ ದೇವಸ್ಥಾನದ ಪ್ರಾಚೀನತೆಯ ಬಗ್ಗೆ ಜನರ ನಂಬಿಕೆಯೊಂದು ಇದ್ದು ಅದು ಹೀಗಿದೆ ; ದೇವಸ್ಥಾನದ ಹೊರಭಾಗದ ಹೊಸ್ತಿಲು ಪ್ರತಿ ಸಾವಿರ ವರ್ಷಗಳಿಗೆ ಒಮ್ಮೆ ಭಿನ್ನವಾಗುತ್ತದೆಯಂತೆ.ಇಲ್ಲಿಯವರೆಗೆ ಎರಡುಬಾರಿ ಭಿನ್ನವಾಗಿದೆ ಅಂದರೆ ಒಡೆದಿದೆಯಾದ್ದರಿಂದ ಎರಡು ಸಾವಿರ ವರ್ಷಗಳ ಪುರಾತನ ಕಾಲದ ದೇವಸ್ಥಾನ ಇದು.ದೇವಸ್ಥಾನದ ಹೊರಭಾಗ ನೋಡಿದಾಗ ಅಷ್ಟು ಪುರಾತನ ಕಾಲದ್ದಲ್ಲ ಎನ್ನಿಸಿದರೂ ಶಂಕರಲಿಂಗ ದೇವರ ಮೂರ್ತಿ ಮತ್ತು ಅದರ ತತ್ತ್ವ ಪ್ರಾಚೀನತೆಯನ್ನು ಗಮನಿಸಿದರೆ ಇದು ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನ ಕಾಲದ ಮೂರ್ತಿ ಎನ್ನುವುದು ಸ್ಪಷ್ಟವಾಗುತ್ತದೆ.ದೇವಸ್ಥಾನಕ್ಕೆ ಅನತಿ ದೂರದಲ್ಲಿ ಎರಡು ಹಳ್ಳಗಳು ಸೇರಿ ಒಂದಾದ ದೊಡ್ಡದಾದ ಹಳ್ಳ ಹರಿಯುತ್ತಿದೆ‌.ಅದನ್ನು ‘ ಕೂರ್ಮಾನದಿ’ ಎಂದು ಕರೆಯುತ್ತಾರಂತೆ.’ ಆಂಧ್ರಪುರಾಣ’ ದಲ್ಲಿ ಶಂಕರಲಿಂಗೇಶ್ವರ ಮಹಾತ್ಮೆಯ ಉಲ್ಲೇಖವಿದ್ದು ಕೂರ್ಮಾನದಿಯ ದಡದಲ್ಲಿದೆ ಎನ್ನುವ ಉಲ್ಲೇಖವಿದೆಯಂತೆ.ಶಾಸನಗಳಲ್ಲಿ ‘ ಜಡೆಯ ಶಂಕರ ದೇವರು’ ಎಂದು ಹೇಳಲಾಗಿದೆ.ಕರ್ನಾಟಕದಲ್ಲಿ ಹಲವುಕಡೆ ಜಡೆಯ ಶಂಕರಲಿಂಗ ದೇವಸ್ಥಾನಗಳಿದ್ದು ಆ ದೇವಸ್ಥಾನಗಳ ಇತಿಹಾಸದೊಂದಿಗೆ ಇಡ್ಲೂರು ಶಂಕರಲಿಂಗ ದೇವಸ್ಥಾನದ ತೌಲನಿಕ ಅಧ್ಯಯನ ಮಾಡಿದಾಗ ಐತಿಹಾಸಿಕ ಸತ್ಯ ದೊರಕಬಹುದು.ಒಂದು ಅರಸು ಮನೆತನೆದವರ ಕುಲದೇವರು ಅಥವಾ ಆರಾಧ್ಯ ದೇವರು ಜಡೆಯ ಶಂಕರಲಿಂಗ ಆಗಿದ್ದು ಅವರ ಮನೆತನದವರು ತಮ್ಮ ಆಳ್ವಿಕೆಗೆ ಒಳಪಟ್ಟ ಭೂಭಾಗದಲ್ಲಿ ಅಲ್ಲಲ್ಲಿ ಜಡೆಯ ಶಂಕರಲಿಂಗ ದೇವಸ್ಥಾನಗಳನ್ನು ಕಟ್ಟಿಸಿರಬಹುದು.

ಇಲ್ಲಿ ನಾನು ಶಂಕರಲಿಂಗ ದೇವರ ಇತಿಹಾಸ,ಪರಂಪರೆ ಮತ್ತು ಮಹಾತ್ಮೆಗಳ ಬಗ್ಗೆ ಚರ್ಚಿಸದೆ ಶಂಕರಲಿಂಗ ಶಿವ ತತ್ತ್ವದ ಬಗ್ಗೆ ಮಾತ್ರ ಚರ್ಚಿಸುವೆ.ಇಡ್ಲೂರು ಶಂಕರಲಿಂಗನ ವೈಶಿಷ್ಟ್ಯ ಎಂದರೆ ಶಿವಲಿಂಗದ ಮುಂಭಾಗದಲ್ಲಿ ಶಿವನ ಮುಖವಿದೆ.ಶಿವನ ಮುಖವೇ ಶಂಕರನಾಗಿದ್ದು ಅದು ಸಾಕಾರ ಶಿವನ ಪ್ರತೀಕ.ಮುಖದ ಹಿಂಭಾಗದ ಲಿಂಗವು ನಿರಾಕಾರ ಅಥವಾ ಮೂಲ ಪರಬ್ರಹ್ಮ ,ಪರಶಿವನ ಸಂಕೇತ.ನಿರಾಕಾರ ಶಿವಲಿಂಗದ ಒಡಲಲ್ಲಿಯೇ ಸಾಕಾರ ಶಂಕರ ಮೂಡಿದ್ದಾನೆ ಎನ್ನುವುದನ್ನು ಗಮನಿಸಬೇಕು.ಅಂದರೆ ನಿರಾಕಾರ ಶಿವನಿಗೆ ಶಂಕರನೆಂಬ ಸಾಕಾರ ಮುಖವಿದೆ.ಜನರು ಶಂಕರನ ಮುಖದ ಮೂಲಕ ಶಿವಲಿಂಗದ ದರ್ಶನ ಮಾಡುತ್ತಾರೆ.

ಶಂಕರಲಿಂಗ ಮುಖಲಿಂಗ ಶಿವ.ಅಂದರೆ ಮುಖವನ್ನು ಹೊಂದಿದ ಶಿವಲಿಂಗ. ಶಿವನು ಮೂಲತಃ ನಿರಾಕಾರ.ಆದರೆ ನಿರಾಕಾರ ಶಿವ ತತ್ತ್ವವು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ.ಜನಸಾಮಾನ್ಯರು ತಾವು ಕಂಡುಂಡ ಜೀವನಾನುಭವದಿಂದ ತಮ್ಮ ದರ್ಶನವನ್ನು ಕಟ್ಟಿಕೊಳ್ಳುತ್ತಾರೆ,ಕಂಡುಕೊಳ್ಳುತ್ತಾರೆ.ದೇವರು ನಿರಾಕಾರ,ಅವನಿಗೆ ಆಕಾರವಿಲ್ಲ,ಬಣ್ಣವಿಲ್ಲ,ಹೆಸರೂ ಇಲ್ಲ ಎಂದರೆ ಗೊಂದಲಕ್ಕೆ ಈಡಾಗುತ್ತಾರೆ.ಜನಸಾಮಾನ್ಯರ ಗೊಂದಲ ಪರಿಹಾರಕ್ಕಾಗಿ ಮತ್ತು ಅವರು ಶಿವಭಕ್ತಿಯನ್ನು ಬೆಳೆಸಿಕೊಳ್ಳುವದಕ್ಕಾಗಿ ರೂಪಿಸಿದ ಶಿವತತ್ತ್ವ ವೇ ಸಾಕಾರ ಶಿವ.ಸಾಕಾರದಿಂದ ನಿರಾಕಾರದತ್ತ ನಡೆಯುವುದೇ ಶಿವಪಥ.

ಶಿವನು ಹೀಗಿದ್ದಾನೆ ಎಂದು ಒಂದು ರೂಪವನ್ನು ಕಾಣುವ ಮೂಲಕ ಶಿವತತ್ತ್ವದ ದರ್ಶನ ಸಾಧ್ಯ.ಶಿವನು ಚರ್ಮಾಂಬರನಾಗಿದ್ದಾನೆ,ಮೈತುಂಬ ಬೂದಿ ಬಡಿದುಕೊಂಡಿದ್ದಾನೆ,ಅವನು ಅಂಗಾಗಗಳಲ್ಲಿ ವಿಭೂತಿ ಲೇಪಿಸಿಕೊಂಡಿದ್ದಾನೆ,ಕೊರಳಲ್ಲಿ ಹಾವನ್ನು ಆಭರಣವನ್ನಾಗಿ ಹೊಂದಿದ್ದಾನೆ.ರುದ್ರಾಕ್ಷಿ ಮಾಲೆ ಧರಿಸಿದ್ದಾನೆ.ಜಟಾಧಾರಿಯಾದ ಶಿವನು ತನ್ನ ಜಟೆಯಲ್ಲಿ ಗಂಗೆ ಮತ್ತು ಚಂದ್ರರನ್ನು ಧರಿಸಿದ್ದಾನೆ.ವೃಷಭವನ್ನು ವಾಹನವನ್ನಾಗಿ ಉಳ್ಳ ಮುಕ್ಕಣ್ಣ ಶಿವನು ತ್ರಿಶೂಲ ಮತ್ತು ಡಮರುಗಗಳನ್ನು ಹಿಡಿದಿದ್ದಾನೆ.ಅವನ ಬಳಿಯಲ್ಲಿ ಪತ್ನಿ ಪಾರ್ವತಿ ಮತ್ತು ಎಡಬಲಗಳಲ್ಲಿ ಮಕ್ಕಳಾದ ಗಣಪತಿ- ಷಣ್ಮುಖರುಗಳಿದ್ದಾರೆ.ಮುಂದೆ ವೀರಭದ್ರನಿದ್ದರೆ ಭೃಂಗಿಯು ನಾಟ್ಯ ಮಾಡುತ್ತಿದ್ದಾನೆ.ಸಹಸ್ರ ಸಂಖ್ಯೆಯ ಋಷಿ,ಮುನಿ,ಸಿದ್ಧರುಗಳಿಂದ ತುಂಬಿದೆ ಕೈಲಾಸದ ಶಿವಸಭಾಭವನ.ಇದು ಆಕಾರಗೊಂಡ ಶಿವನ ಬೆಡಗು.ಈ ಸಾಕಾರ ಶಿವನನ್ನು ಮೂರ್ತಿ,ಚಿತ್ರಪಟಗಳಲ್ಲಿ ಕಾಣಬಹುದು.ಇಂತಹ ಕಾಣುವ ಶಿವನನ್ನೇ ಶಿವನೆಂದು ಬಗೆಯಬಲ್ಲರಲ್ಲದೆ ಜನಸಾಮಾನ್ಯರು ಆಕಾರವಿಲ್ಲದ,ಉಪಾದಿಗಳಿಲ್ಲದ ಶಿವ ಎಂದರೆ ಕಲ್ಪಿಸಿಕೊಳ್ಳಲಾರರು.ಪರಶಿವ ಎನ್ನುವುದು ನಿರಾಕಾರ ಶಿವನ ಹೆಸರಾದರೆ ಶಂಕರ ಎನ್ನುವುದು ಸಾಕಾರ ಶಿವನ ರೂಪ.ಶಂಕರ,ಹರ ,ಮಹಾದೇವ ಮೊದಲಾದ ಹೆಸರುಗಳಲ್ಲಿ ಕರೆಯಲಾಗುತ್ತದೆ ಸಾಕಾರಶಿವನನ್ನು.

ನಿರಾಕಾರ ಶಿವನನ್ನು ಯೋಗಿಗಳು ಯೋಗಬಲದಿಂದ ಅನುಭವಿಸಿದರೆ ಶಂಕರನನ್ನು ಭಕ್ತರು ಪ್ರತ್ಯಕ್ಷಕಂಡು ಸಾಕ್ಷಾತ್ಕಾರವನ್ನನುಭವಿಸಬಲ್ಲರು.ನಾಮ ರೂಪ ಕ್ರಿಯೆಗಳುಳ್ಳ ಶಿವನನ್ನು ಕಾಣಬಹುದು ಅಂದರೆ ಸಾಕ್ಷಾತ್ಕರಿಸಿಕೊಳ್ಳಬಹುದು.ಆದರೆ ನಿರಾಕಾರ ಶಿವನು ಕೇವಲ ಅನುಭವವೇದ್ಯನು.ಭಕ್ತರಿಗೆ ಹರ- ಶಂಕರನಾಗಿ ಕಾಣುವ ಶಿವನು ಯೋಗಿಗಳಿಗೆ ಯೋಗೀಶ್ವರ ಶಿವನಾಗಿ ಗೋಚರಿಸುವನು.ಹೃದಯವು ಶಂಕರನ ಸ್ಥಾನವಾದರೆ ಸಹಸ್ರಾರವು ಪರಶಿವನ ಸ್ಥಾನ.ಹೃದಯಲ್ಲಿ ಭಕ್ತಿರಸ ಇದೆ.ಆ ಭಕ್ತಿರಸದಲ್ಲಿ ಶಿವನನ್ನು ಮೀಯಿಸುವ ಮೂಲಕ ಭಕ್ತವತ್ಸಲ ಶಿವನನ್ನು ಕಾಣಬಹುದು.ಸಹಸ್ರಾರದಲ್ಲಿ ಸಹಸ್ರದಳ ಕಮಲಮಧ್ಯದಿ ಪವಡಿಸಿಪ್ಪ ಪರಶಿವನನ್ನು ಯೋಗಶಕ್ತಿಯಿಂದ ಮಾತ್ರ ಕಾಣಬಹುದು.ನಮ್ಮ ದೇಹದ ಹೃದಯ ಮತ್ತು ತಲೆಯ ಸಹಸ್ರಾರಗಳೆರಡೂ ಸೇರಿ ಶಂಕರಲಿಂಗ ತತ್ತ್ವ ! ಸಾಕಾರ ಮತ್ತು ನಿರಾಕಾರಗಳೆರಡರ ಪ್ರಾತಿನಿಧಿಕ ಶಿವಸ್ವರೂಪವೇ ಶಂಕರಲಿಂಗ ಶಿವತತ್ತ್ವ.ಶಂಕರನಾಗಿ ಜಗದೋದ್ಧಾರದ ಲೀಲೆ ನಟಿಸುವ ಸಾಕಾರ ಶಿವನೇ ತನಗೆ ಲೀಲೆ ಸಾಕು ಎನಿಸಿದಾಗ ರುದ್ರನಾಗಿ ಪ್ರಕಟಗೊಂಡು ಜಗತ್ಪ್ರಳಯವನ್ನುಂಟು ಮಾಡಿ ಅದನ್ನು ತನ್ನಲ್ಲಿ ಅಡಗಿಸಿಕೊಳ್ಳುವನು.ನಿಶೂನ್ಯ,ನಿರಾಡಂಬರ,ನಿರವಯವ,ನಿರಂಜನ ತತ್ತ್ವದ ಪ್ರತೀಕವು ಶಿವಲಿಂಗವಾದರೆ ಆ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು,ಪ್ರತ್ಯಕ್ಷವಾಗಿ ಕಾಣಬಹುದು ಎನ್ನುವ ಸೂತ್ರವೇ ಶಂಕರಲಿಂಗ ದರ್ಶನ.ಹೀಗೆ ಸಾಕಾರ – ನಿರಾಕಾರ ತತ್ತ್ವಗಳೆರಡರ ಸಂಗಮವೇ ‘ ಶಂಕರಲಿಂಗ ಶಿವ ತತ್ತ್ವ’.