ಮಾನ್ವಿ: ಡೆಂಗಿ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಜನಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ

ಮಾನ್ವಿ ಸೆ.19:
‘ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳು ಜನಜಾಗೃತಿ ಮೂಡಿಸಬೇಕು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಇಂದು ಮಾನ್ವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿದರು. ‘ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶಂಕಿತ ಡೆಂಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎಲ್ಲೆಡೆ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಬೇಕು. ಎಲ್ಲಾ ವಾರ್ಡ್‍ಗಳಲ್ಲಿ ರಾಸಾಯನಿಕ ಸಿಂಪಡಣೆ (ಫಾಗಿಂಗ್) ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ, ಮಕ್ಕಳ ತಜ್ಞ ಡಾ.ಶರಣಬಸವ, ಇತರ ವೈದ್ಯಾಧಿಕಾರಿಗಳಾದ ಡಾ.ಉದಯಭಾಸ್ಕರ್, ಡಾ.ಶರಣಬಸವ, ಪುರಸಭೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಹಂಪಯ್ಯ, ಕಂದಾಯ ಇಲಾಖೆಯ ವಿರೂಪಾಕ್ಷಿ, ಹನುಮಂತರಾಯ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಇಬ್ರಾಹಿಂ ಖುರೇಷಿ, ಬಾಷಾಸಾಬ್, ಮರೇಗೌಡ ಬುದ್ದಿನ್ನಿ, ಗೋಪಾಲನಾಯಕ ಹರವಿ, ಹನುಮಂತ ಭೋವಿ ಇದ್ದರು.