ಸಿರವಾರ ಸೆ.19- ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿರುವ ಸ್ವಚ್ಚ, ಸುಂದರ ಪರಿಸರವನ್ನು ನಮ್ಮ ಮುಂದಿನ ಪಿಳಿಗೆಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ‘ ಹಸಿರು ನಮ್ಮ ಉಸಿರು” ಎನ್ನುವ ಘೋಷಣೆ ಸಾಕಾರವಾಗಬೇಕಾದರೆ, ಕೇವಲ ಸಸಿಗಳನ್ನು ನೆಟ್ಟು ಪೊಜು ಕೊಟ್ಟರೆ ಸಾಲದು, ಸಸಿಗಳನ್ನು ನಮ್ಮ ಮಕ್ಕಳಂತೆ ಪಾಲನೆ- ಪೊಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ ಹೇಳಿದರು. ಇಂದು ಬೆಳಿಗ್ಗೆ ಸಿರವಾರ ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಯ ನಂ.90 ನೇ ವಿತರಣಾ ಕಾಲುವೆಯ ಪಕ್ಕದಲ್ಲಿ ‘ಗ್ರೀನ್ ಸಿರವಾರ’ ಅಭಿಯಾನವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಉಚಿತವಾಗಿ ಸಸಿಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಸಸಿಗಳನ್ನು ಪಡೆದು ಖಾಲಿ ಇರುವ ಸ್ಥಳಗಳಲ್ಲಿ ನೆಟ್ಟು ಮರವನ್ನಾಗಿಸಿದಾಗ ಹಸಿರೆ ಉಸಿರಾಗುತ್ತದೆ. ಇಂದು ಸಸಿಗಳನ್ನು ನೆಟ್ಟು ನಾಳೆ ಅವುಗಳನ್ನು ನಿರ್ಲಕ್ಷ ಮಾಡಿದರೆ ‘ಗ್ರಿನ್ ಸಿರವಾರ’ ಆಗುವುದಿಲ್ಲ. ಕಾರಣ ನಿರಂತರವಾಗಿ ಸಸಿಗಳ ಬೆಳವಣಿಗೆಗೆ ಕಾಳಜಿವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಮಾತನಾಡಿ, ಈ ಎರಡು ವರ್ಷಗಳಲ್ಲಿ ಆಮ್ಲಜನಕದ ಮಹತ್ವ ನಮ್ಮ ಜನರಿಗೆ ಆಗಿದೆ. ಆಮ್ಲಜನಕ ಬೇಕು ಮರಗಳು ಬೇಡ ಎನ್ನುವುದು ತಪ್ಪು. ಖಾಲಿ ಇರುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಸಸಿಗಳನ್ನು ಬೆಳೆಸುವುದು ಅಗತ್ಯ. ಸಿರವಾರ ಪಟ್ಟಣದ ಜನರು ಮರಗಿಡಗಳನ್ನು ಬೆಳೆಸುವ ಮೂಲಕ ಇನ್ನೂ ಸಿರಿವಂತರಾಗಲಿ ಎಂದರು. ಎನ್.ಉದಯಕುಮಾರ ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಮ್ಸ್ ಸಂಸ್ಥೆಯ ತಜ್ಞ ಡಾ.ಎನ್.ವಿಜಯಶಂಕರ, ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ, ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ, ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ವೈದ್ಯಾಧಿಕಾರಿ ಡಾ.ಪರಿಮಳಾ ಮೈತ್ರಿ, ಸಿಪಿಐ ಗುರುರಾಜ ಕಟ್ಟಿಮನೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಮರೇಗೌಡ ಪಾಟೀಲ್, ಮುಖಂಡರಾದ ಚುಕ್ಕಿಶಿವಾನಂದ, ಬ್ರೀಜೇಶ ಪಾಟೀಲ್, ಜೆ.ದೇವರಾಜಗೌಡ, ಶಿವಶರಣಗೌಡ ಲಕ್ಕಂದಿನ್ನಿ, ಚುಕ್ಕಿ ಶಿವಕುಮಾರ, ನರಸಿಂಹರಾವ್ ಕುಲಕರ್ಣಿ, ನಾಗಪ್ಪ ಪತ್ತಾರ, ಎನ್.ಚಂದ್ರಶೇಖರ, ಚಂದ್ರು ಕಳಸ, ಅಯ್ಯನಗೌಡ ಏರಡ್ಡಿ ,ಗುರುಗೌಡ, ಪ.ಪಂ ಮಾಜಿ ಸದಸ್ಯರಾದ ಇರ್ಫಾನ್,ಕೃಷ್ಣನಾಯಕ, ಚನ್ನಪ್ಪ,ರಾಜ್ ಮಹ್ಮದ, ಇಮಾಮ್, ಸಂದೀಪ್ ಪಾಟೀಲ್, ನಾಗರಾಜ, ದೇವೆಂದ್ರಪ್ಪ, ಮಾರ್ಕಪ್ಪ, ಮಲ್ಲಪ್ಪ, ಖಾಸಿಂ ಮೋತಿ, ಡಿ.ಯಮನೂರು, ಶಾಂತಪ್ಪ ಪಿತಗಲ್ ಮತ್ತಿತರರು ಇದ್ದರು.