ಚಿಂತನೆ : ಜನಪದರ ದೈವ ಜೋಕುಮಾರಸ್ವಾಮಿ

ಲೇಖಕರು: ಮುಕ್ಕಣ್ಣ ಕರಿಗಾರ

ಜನಪದರ ದೈವ ಜೋಕುಮಾರಸ್ವಾಮಿ

ನಾಳೆ ಅಂದರೆ ಸೆಪ್ಟೆಂಬರ್ ೨೦ ರಂದು ಬರುವ ಹುಣ್ಣಿಮೆಯು ‘ ಜೋಕುಮಾರನ ಹುಣ್ಣಿಮೆ’ ಯಾಗಿದ್ದು ನಾಡ ಜನಪದರು ಅಂದು ಜೋಕುಮಾರನನ್ನು ಬಾವಿ,ಕೆರೆ- ಹಳ್ಳ ಮತ್ತು ನದಿಗಳಲ್ಲಿ ವಿಸರ್ಜಿಸುವ ಮೂಲಕ ಆತನನ್ನು ಕೈಲಾಸಕ್ಕೆ ಕಳುಹಿಸುತ್ತಾರೆ.ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ.ನಾಡಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಮುದ್ದಿನ ಕುಮಾರಸ್ವಾಮಿ ಎಂದು ಬಣ್ಣಿಸಲೋಸುಗ ‘ ಜೋಕುಮಾರ’ ಎಂದು ಕರೆಯುತ್ತಾರೆ.ಪಾರ್ವತಿಪುತ್ರ ಗಣಪತಿಯು ಭೂಲೋಕಕ್ಕೆ ಬಂದು ಹೋದ ಬಳಿಕ ಕೈಲಾಸದಿಂದ ಧರೆಗೆ ಬರುತ್ತಾನೆ ಶಿವಪುತ್ರ ಕುಮಾರಸ್ವಾಮಿ ಅಥವಾ ಷಣ್ಮುಖ.ಜನಪದರು ಈ ಬಗ್ಗೆ ಒಂದು ಸುಂದರವಾದ ಕಥೆ ಕಟ್ಟಿದ್ದಾರೆ.

ಕೈಲಾಸದಲ್ಲಿ ತನ್ನ ಗಣಗಳೊಂದಿಗೆ ಲೀಲಾ ವಿನೋದದಲ್ಲಿ ತೊಡಗಿರುವ ಶಿವನು ಭೂಲೋಕದಲ್ಲಿ ಜನರು ಹೇಗಿದ್ದಾರೆ,ಅವರು ಕಷ್ಟದಿಂದಿದ್ದಾರೋ,ಸುಖದಿಂದ ಇದ್ದಾರೋ ಎಂದು ತಿಳಿಯುವ ಕುತೂಹಲದಿಂದ ಮೊದಲು ಗಣೇಶನನ್ನು ಭೂಮಿಗೆ ಕಳುಹಿಸುತ್ತಾನೆ.ಭೂಲೋಕದ ಜನರು ಗಣೇಶನನ್ನು ಅದ್ದೂರಿಯಾಗಿ ಸ್ವಾಗತಿಸುತ್ತಾರೆ.ಮನೆಮನೆಗಳನ್ನು ಸಿಂಗರಿಸಿ,ಗಣಪತಿಯನ್ನು ಪೂಜಿಸಿ,ವಿವಿಧ ಭಕ್ಷ್ಯ- ಭೋಜ್ಯಗಳಿಂದ ಅವನನ್ನು ಸಂತೃಪ್ತಗೊಳಿಸುತ್ತಾರೆ.ಗಣಪತಿಗೆ ಪ್ರಿಯವಾದ ಮೋದಕ- ಕಡಬುಗಳ ನೈವೇದ್ಯವನ್ನರ್ಪಿಸಿ ಗಣಪತಿಯನ್ನು ಸಂತೃಪ್ತಗೊಳಿಸಿ,ಕೇಕೆ- ಕುಣಿತ- ನರ್ತನಾದಿಗಳಿಂದ ಅವನನ್ನು ಆನಂದಿತನನ್ನಾಗಿಸಿ ಬೀಳ್ಕೊಡುತ್ತಾರೆ.ತಿಂದ ಕಜ್ಜಾಯ,ಮೋದಕಗಳನ್ನು ಜೀರ್ಣಿಸಿಕೊಳ್ಳಲಾಗದೆ ಹೊಟ್ಟೆಯ ಮೇಲೆ ಕೈಯಾಡಿಸುತ್ತ,ಆಕಳಿಸುತ್ತ ಬಂದ ಗಣಪತಿಯು ತಂದೆ ಶಿವನಿಗೆ ‘ ಭೂಲೋಕದ ಜನರು ಸುಖ- ಸಂತೋಷದಿಂದ ಇದ್ದಾರೆ’ ಎಂದು ವರದಿಯನ್ನು ಒಪ್ಪಿಸುತ್ತಾನೆ.’ ಸರಿ’ ಎನ್ನುತ್ತಾನೆ ಜಗದೀಶ್ವರ ಶಿವ.

ಆದರೆ ಶಿವ ಸಭೆಯಲ್ಲಿದ್ದ ನಾರದ ಗಣಪತಿಯ ವರದಿಗೆ ಆಕ್ಷೇಪ ಎತ್ತುವನು! ‘ ಲೋಕಪ್ರಭುಪರಮೇಶ್ವರ,ಗಣಪತಿಯು ಲೋಕಜನರ ಬದುಕನ್ನು ಸರಿಯಾಗಿ ಗಮನಿಸಿಲ್ಲ.ಗಣಪತಿಯ ಲೋಕವಾರ್ತೆ ಸ್ವೀಕಾರಾರ್ಹವಲ್ಲ!’.ತ್ರಿಲೋಕಸಂಚಾರಿಯಾದ ನಾರದರು ತ್ರಿಕಾಲಜ್ಞಾನಿಗಳು ಬೇರೆ.ಎಲ್ಲವನ್ನು ಕುಳಿತಲ್ಲೇ ಗ್ರಹಿಸಬಲ್ಲ ಸಾಮರ್ಥ್ಯದ ಕಲಹಪ್ರಿಯರು ನಾರದರು.ನಾರದರ ಮಾತನ್ನು ಕೇಳಿದ ಶಿವ ಸಭೆಯು ತಮ್ಮ ತಮ್ಮೊಳಗೆ ಗುಸುಗುಸು ಮಾತನಾಡುವರು.ಶಿವನು ನಾರದ ಮತ್ತು ಶಿವ ಸಭೆಯ ಸಂಶಯ ಪರಿಹಾರಾರ್ಥವಾಗಿ ತನ್ನ ಎರಡನೇ ಮಗ ಷಣ್ಮುಖನನ್ನು ಕರೆದು ‘ ಕುಮಾರ,ನೀನು ಹೋಗಿ ನೋಡಿ ಬಾ ಭೂಲೋಕದ ಜನರು ಸುಖದಿಂದ ಇದ್ದಾರೋ ಅಥವಾ ಕಷ್ಟದಲ್ಲಿ ಇದ್ದಾರೋ.’ ‘ಅಪ್ಪಣೆ ‘ ಎಂದು ಶಿವನಿಂದ ಬೀಳ್ಕೊಂಡು ಕುಮಾರಸ್ವಾಮಿಯು ಭೂಲೋಕಕ್ಕೆ ಐತರುವನು.ಕುಮಾರಸ್ವಾಮಿಯು ಭೂಲೋಕಕ್ಕೆ ಬರುವ ಹೊತ್ತಿಗೆ ಮಳೆ ಬೆಳೆ ಇಲ್ಲದೆ ಭೂಮಿಯಲ್ಲಿ ಬರಗಾಲ ಬಿದ್ದಿರುತ್ತದೆ.ಜನರು- ದನಕರುಗಳಿಗೆ ತಿನ್ನಲು ಆಹಾರ,ಕುಡಿಯಲು ನೀರು ಸಿಗದೆ ಪರದಾಡುತ್ತಿರುವ ಕಷ್ಟದ ದಿನಗಳು ಬಂದೆರಗಿರುತ್ತವೆ.ಹೊಟ್ಟೆ ಬಟ್ಟೆಗಿಲ್ಲದೆ ಪರದಾಡುತ್ತಿರುವ ಜನರು ಶಿವಪುತ್ರ ಕುಮಾರಸ್ವಾಮಿಯನ್ನು ಹೇಗೆ ಸ್ವಾಗತಿಸಿಯಾರು?ಆದರೂ ಶಿವಪುತ್ರನೆಂಬ ಕಾರಣದಿಂದ ಶೂದ್ರರು,ದಲಿತರು ಅವನನ್ನು ಬುಟ್ಟಿಯಲ್ಲಿ ಕೂಡಿಸಿ ತಲೆಯಲ್ಲಿ ಹೊತ್ತು ಭಿಕ್ಷೆ ಎತ್ತಿ,ಸಿಕ್ಕ ಚೂರು ರೊಟ್ಟಿ,ತಂಗಳಾನ್ನವನ್ನೇ ನೈವೇದ್ಯ ಎಂದು ಸಮರ್ಪಿಸಿ,ಚಿಂದಿಬಟ್ಟೆಗಳನ್ನುಡಿಸಿ ಬೀಳ್ಕೊಡುವರು.ಧರೆಯ ಜನರ ಬವಣೆಯನ್ನು ಕಂಡು ದುಃಖಿತನಾದ ಕುಮಾರಸ್ವಾಮಿಯು ಕೈಲಾಸದ ಬಾಗಿಲ ಬಳಿ ಬರುತ್ತಲೇ ಲೊಬೊ ಲೊಬೊ ಎಂದು ಬಾಯಿಬಡಿದುಕೊಂಡು ಅಳುವನು.ಮಗನಿಗೆ ಏನಾಯಿತು ಎಂದು ವಟವೃಕ್ಷಮೂಲದಿಂದೆದ್ದ ಶಿವ ಪಾರ್ವತಿಯರು ಕೈಲಾಸದ ದ್ವಾರದ ಬಳಿ ಓಡೋಡಿ ಬರುವರು.’ ಏನು ಕುಮಾರ,ಏನಾಯಿತು? ಏನಿದು ನಿನ್ನ ದೈನ್ಯಾವಸ್ಥೆ? ಏಕಿಂತು ಕಂಗಾಲಾಗಿರುವೆ? ಒಳ ಬಾ’ ಎಂದು ಕರೆಯುವರು.
‘ ಇಲ್ಲ,ನಾನು ಒಳ ಬರುವುದಿಲ್ಲ.ಭೂಲೋಕದ ಜನರು ಮಳೆ ಬೆಳೆ ಇಲ್ಲದೆ ಅನ್ನ- ನೀರಿಲ್ಲದೆ ಸಾಯುತ್ತಿದ್ದಾರೆ.ಅವರ ಬವಣೆ ಹೇಳತೀರದು.ಭೂಲೋಕದ ಜನರ ಸಮಸ್ಯೆ ಪರಿಹರಿಸಿದರೆ ಮಾತ್ರ ನಾನು ಒಳ ಬರುವೆ’ ಎಂದು ಕೈಲಾಸದ ದ್ವಾರಬಾಗಿಲಲ್ಲೇ ಕುಳಿತುಕೊಳ್ಳುವನು ಮುಷ್ಕರಹೂಡಿ! ಶಿವನು ಆ ಕೂಡಲೆ ವರುಣನನ್ನು ಕರೆದು ‘ ಭೂ ಲೋಕದಲ್ಲಿ ಯಥೇಚ್ಛ ಮಳೆಕರೆಯುವಂತೆ ಆಜ್ಞಾಪಿಸುವನು.ಓಷಧಿಗಳನ್ನು ಕಳುಹಿ ಸಸ್ಯಸಮೃದ್ಧಿಯಾಗುವಂತೆ ಹರಸುವನು.ತನ್ನ ಮಡದಿ ಪಾರ್ವತಿಯನ್ನು ಅನ್ನಪೂರ್ಣೇಶ್ವರಿಯ ರೂಪತಳೆದು ಧರೆಗೆ ಹೋಗಿ ಜನರಿಗೆ ಅನ್ನನೀಡುವಂತೆ ಆಜ್ಞಾಪಿಸಿ ಕಳುಹಿಸುವನು.ಕುಬೇರನಿಗೆ ಲೋಕದ ಜನರಿಗೆ ಐಶ್ವರ್ಯ ನೀಡಲು ಆಣತಿಯನ್ನಿತ್ತು ಕಳಹುವನು.ಹೀಗೆ ಭೂಲೋಕವು ಕಷ್ಟಮುಕ್ತವಾಗಿ ಸುಖ- ಸಮೃದ್ಧಿಯಿಂದ ಆನಂದಿತವಾಯಿತು.ಭೂಲೋಕದ ಆನಂದವನ್ನು ಕಂಡು ಕುಮಾರಸ್ವಾಮಿಯು ಕೈಲಾಸದ ಶಿವ ಸದನ ಪ್ರವೇಶಿಸುವನು.ನಾರದರು ಷಣ್ಮುಖನಿಗೆ ಜಯಘೋಷ ಕೂಗುವರು.ಶಿವಗಣರು ಬಗೆಬಗೆಯ ಸ್ತುತಿವಾಕ್ಕುಗಳಿಂದ ಕುಮಾರಸ್ವಾಮಿಯ ಲೋಕಾನುಗ್ರಹ ಬುದ್ಧಿಯನ್ನು ಕೊಂಡಾಡುವರು.

ಇದು ಜನಪದರ ಜೋಕುಮಾರಸ್ವಾಮಿಯ ಕಥೆ.ಈ ಕಥೆಯು ಶಿವಪುತ್ರ ಕುಮಾರಸ್ವಾಮಿಯು ಜನಪದರ ದೈವ,ಲೋಕಹಿತೈಷಿ ಎನ್ನುವ ಸಂದೇಶವನ್ನು ಸಾರುತ್ತದೆ.ಗಣಪತಿಯು ಶಿಷ್ಟವರ್ಗದ ದೈವವಾಗಿದ್ದರೆ ಕುಮಾರಸ್ವಾಮಿಯು ಜನಪದರ ದೈವ.ಗಣಪತಿಯನ್ನು ಸಿರಿವಂತರು,ಉಳ್ಳವರು ವೈಭವದಿಂದ ಪೂಜಿಸಿ ಪ್ರತಿಷ್ಠೆ ಮೆರೆದರೆ ಕುಮಾರಸ್ವಾಮಿಯನ್ನು ಬಡವರು,ಪದದುಳಿತರು ಪೂಜಿಸಿ,ಭಿಕ್ಷಾನ್ನವನ್ನಿತ್ತು ಭಕ್ತಿಮೆರೆಯುವರು.ಗಣಪತಿಯು ಉಳ್ಳವರ ದೇವರಾದರೆ ಕುಮಾರಸ್ವಾಮಿಯು ಬಡವರ ದೇವರು.ಇಂದಿಗೂ ಗಣಪತಿ ಉತ್ಸವವನ್ನು ವೈಭವದಿಂದ ಆಚರಿಸಿದರೆ ಕುಮಾರಸ್ವಾಮಿಯನ್ನು ಶೂದ್ರ ಮತ್ತು ದಲಿತ ಮಹಿಳೆಯರು ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹೊತ್ತು ಮನೆಮನೆಯ ಭಿಕ್ಷೆಬೇಡಿ ಜೋಕುಮಾರನ ಹಾಡುಗಳನ್ನು ಹಾಡಿ,ಪೂಜಿಸಿ ಹುಣ್ಣಿಮೆಯ ದಿನದಂದು ಬೀಳ್ಕೊಡುತ್ತಾರೆ.

ಲೋಕಪ್ರಭುವಾದ ಪರಮೇಶ್ವರ ಶಿವನ ಮೊದಲ ಮಗ ಗಣಪತಿಯು ಪ್ರಭುತ್ವದ ಪ್ರತೀಕವಾದರೆ ಕಿರಿಯ ಮಗ ಕುಮಾರಸ್ವಾಮಿಯು ತನ್ನ ಲೋಕಾನುಗ್ರಹ ಬುದ್ಧಿಯಿಂದ ಜನಪದರ ದೈವವಾದನು.ಗಣಪತಿಯು ಶಿಷ್ಟದೇವತೆಯಾದರೆ ಷಣ್ಮುಖನು ಜನಪದರ ದೈವವಾದನು.ತಮ್ಮ ಕಷ್ಟಕ್ಕೆ ಕರಗಿ ಶಿವಕಾರುಣ್ಯವನ್ನು ಲೋಕಕ್ಕೆ ಉಣಬಡಿಸಿದ ಕುಮಾರಸ್ವಾಮಿಯನ್ನು ಜನಪದರು ಪ್ರೀತಿಯಿಂದ ‘ ಜೋಕುಮಾರ’ ಎಂದು ಕರೆದು,ಗೌರವಿಸುವುದು ಅರ್ಥಪೂರ್ಣವಾದುದು.

19.09.2021

One thought on “ಚಿಂತನೆ : ಜನಪದರ ದೈವ ಜೋಕುಮಾರಸ್ವಾಮಿ

Comments are closed.