ಅಲೆವ ನದಿಃ ಬೆವರು ಬವಣೆಯ ಅಲೆಗಳು
ಹಳೆಮನೆ ರಾಜಶೇಖರ
ಕಿರಸೂರು ಗಿರಿಯಪ್ಪ ದುಡಿವ ಮಣ್ಣಿನಿಂದ ಉದಯಿಸಿದ ಕವಿ. ಕವಿತೆ ಕಟ್ಟುವ ಉಮೇದಿ ಅವರಲ್ಲಿ ತೀವ್ರವಾಗಿದೆ. ಬದುಕನ್ನು ಆವರಿಸಿಕೊಂಡಿರುವ ಅಸಮಾನತೆಯ ಉರಿಯ ಅನಾವರಣ ಅವರ ಕವಿತೆಗಳ ನೆಲೆ. ನೆಲ, ನೀರು, ಗಾಳಿ, ತಾರೆ, ಸೂರ್ಯ, ಚಂದ್ರ, ತಾಯಿ, ಮೋಡ, ಹೂ, ಮರ, ಕರುಳು, ಪಾದ, ನೆತ್ತಿಯಂತಹ ಜೀವ ಪೊರೆಯುವ ಸಹಜತೆಗಳು ಪರಿಣಾತ್ಮಕ ಪ್ರತಿಮೆಗಳಾಗಿ ಇವರ ಕಾವ್ಯದಲ್ಲಿ ಬರುತ್ತವೆ. ಇವು ಬವಣೆಯನ್ನು ಮತ್ತೆ ಮತ್ತೆ ಧ್ವನಿಸುತ್ತವೆ. ಬೆವರಿನ ಬೇರುಗಳ ಮೂಲಕ ಬದುಕನ್ನು ನೋಡುವ ದೃಷ್ಟಿಕೋನ ಅವರ ಕವಿತೆಗಳಲ್ಲಿದೆ. ಬೆವರಿನ ಬವಣೆಯಲ್ಲಿ ಬೆಯ್ಯುವ ಬದುಕಗಳನ್ನೇ ಮತ್ತೆ ಮತ್ತೆ ಕಾವ್ಯ ಧ್ವನಿಯನ್ನಾಗಿಸುವುದು ಇವರ ಆಶಯ. ಈ ಪ್ರಕ್ರಿಯೆ ಅವರ ಗಜಲ್‍ಗಳಲ್ಲಿಯೂ ಮುಂದುವರೆದಿದೆ.
`ಅಲೆವ ನದಿ’ ಬದುಕಿನ ಬಹುದೊಡ್ಡ ರೂಪಕವಾಗಿ ಬರುತ್ತದೆ. ನದಿಯು ಚಲಿಸುತ್ತದೆ. ಬದುಕು ಚಲಿಸುತ್ತದೆ. ಮಳೆ, ಬಿರುಗಾಳಿ, ಬಿಸಿಲು, ಪ್ರವಾಹ, ಸುನಾಮಿ, ಬಿರುಸುಳಿಯಿಂದ ನದಿ ಬಳಲಿಯೂ ದಾಟಿ ಹರಿಯುತ್ತಿರುತ್ತದೆ. ಬದುಕಿನ ನೆಲೆಯು ಇದೇ ತೆರನಾದ ಹರಿಯುವಿಕೆಯನ್ನು ಹೊಂದಿರುತ್ತದೆ. ಬದುಕಿನ ಚಲನಗೆ ಅಡ್ಡಿಯಗುವ ಶಕ್ತಿಗಳನ್ನು ಎದುರುಗೊಂಡು, ಬಿಡುಗಡೆಯಾಗುವ ಮಾರ್ಗವೊಂದನ್ನು ಇವರ ಕಾವ್ಯ ಶೋಧಿಸುತ್ತದೆ.
ಈ ಭೂಮಿಕೆಗೆ ಗಜಲ್ ಪ್ರಕಾರವನ್ನು ಒಗ್ಗಿಸುವ ಪ್ರಯತ್ನವನ್ನು ಗಿರಿಯಪ್ಪ ಈ ಗಜಲ್‍ಗಳ ಸಂಕಲನದಲ್ಲಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಲೇಖಕರು ಇಂಗ್ಲಿಷ್ ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಉರ್ದು ಸಾಹಿತ್ಯದ ಪ್ರಭಾವಕ್ಕೆ ಒಳಗಾದವರು. ಅದರ ಚಿಂತನೆ ರೂಪಗಳನ್ನು ಆರಂಭದ ತಲೆಮಾರಿನ ಲೇಖಕರು ಅರಗಿಸಿಕೊಂಡು ಕನ್ನಡತನವನ್ನು ಕೊಡುವ ಪ್ರಯತ್ನ ಮಾಡಿದರು. ಅದರಲ್ಲಿ ಶಾಂತರಸ, ಚಂದ್ರಕಾಂತ ಕುಸುನೂರರು ಯಶಸ್ವಿಯಾದರು. ಇದೇ ದಾರಿಯನ್ನು ಹೊಸ ತಲೆಮಾರಿನ ಕವಿಗಳು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇವರು ನಿಜವಾಗಿಯೂ ಉರ್ದುವನ್ನು ಬೇರು ಸಮೇತ ಅಧ್ಯಯನ ಮಾಡಿದರೆ ಆ ಪ್ರಕಾರಕ್ಕೆ ಕನ್ನಡದ ಬನಿಯನ್ನು ಕೊಡಬಹುದು. ಇಲ್ಲದಿದ್ದರೆ ಕೇವಲ ರೋಚಕ ಶಬ್ದಗಳ ಜೋಡಣೆಯಾಗುತ್ತದೆ.
ಉತ್ತಮ ಕವಿತೆಗಳನ್ನು ಬರೆಯುವ ಗಿರಿಯಪ್ಪ ಗಜಲ್ ಗಳನ್ನು ಬರೆಯುವ ಕಸರತ್ತನ್ನು ಮಾಡುತ್ತಿದ್ದಾರೆ. ಅದರ ರೂಪವೇನೋ ಅವರಿಗೆ ದಕ್ಕಿದೆ. ಆದರೆ ಆ ಪ್ರಕಾರದ ಅಂತಃಸತ್ವ ದಕ್ಕಿಲ್ಲ. ಅದು ಬದುಕನ್ನು ಶೋಧಿಸುವ ವಿನ್ಯಾಸ ಇವರ ಗಜಲ್ ಗಳಲ್ಲಿ ಇನ್ನಷ್ಟೂ ಆಳಕ್ಕೆ ಇಳಿಯಬೇಕಿದೆ. ಪ್ರೇಮ, ಪ್ರೀತಿ ಆಧ್ಯಾತ್ಮ, ಅನುಭಾವವನ್ನು ಉತ್ಕಟವಾಗಿ ಅಭಿವ್ಯಕ್ತಿಸುವ ಉರ್ದು ಗಜಲ್‍ಗಳು ವಾಸ್ತವದ ಉರಿಯೊಂದಿಗೆ ಮುಖಾಮುಖಿಯಾಗುತ್ತವೆ. ಪ್ರಭುತ್ವದ ಬೆನ್ನನ್ನು ಎದುರಿಗಿಡಿಯುತ್ತವೆ. ಬದುಕಿನ ದಂದುಗಗಳನ್ನು ವಿವೇಕವನ್ನಾಗಿ ರೂಪಿಸುತ್ತವೆ. ಆ ವಿನ್ಯಾಸ ಹೊಸ ತಲೆಮಾರಿನ ಗಜಲ್‍ಕಾರರಿಗೆ ದಕ್ಕಬೇಕಿದೆ.
ಗಿರಿಯಪ್ಪನವರ ಗಜಲ್‍ಗಳಲ್ಲಿ ಬದುಕಿನ ಬವಣೆ, ಸಂಕಟ, ಸಂಘರ್ಷದ ನೆಲೆಗಳನ್ನು ಕಾಣುತ್ತೇವೆ.
ಕಾಡು ಕಲ್ಲುಗಳ ಅರಳಿಸುವ ನೆಲದ ನೇಗಿಲುಗಳು ಕರುಳ ಬೆಸುಗೆಯಾಗಿ ಮೂಡ್ಯಾವು
ಹೊಕ್ಕಳ ಅರಳಿಸುವ ನೆಲೆಗಳು ಬೆವರ ಹನಿಯಾಗಿ ಮನದೊಳಗ ಇಳಿದವು
ಎಂಬಂತ ಸಾಲುಗಳು ಶಕ್ತವಾದ ಬೆವರಿನ ಪ್ರತಿಮೆಯಾಗಿ ಬರುತ್ತವೆ. ಹೊಲ, ಸಲಿಕೆ, ನೇಗಿಲಿನಂತ ಪ್ರತಿಮೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಫಲವತ್ತಾದ ಪೈರನು ಬೆಳೆದು ರಾಶಿಯಾದ ಕೈಗಳು
ಒಣ ಭೂಮಿಯಲಿ ಕನಸ ಕಾಳಿಗಾಗಿ ತಡಕಾಡಿದವು
ಎಂದು ಕವಿ ಪ್ರೀತಿಯ ಹುಡುಕಾಟವನ್ನು ಮಾಡುತ್ತಾನೆ. ದುಡಿದು ಹಣ್ಣಾದ ಜೀವಿಗಳಿಗೆ ಉಳ್ಳವರು ಸಣ್ಣ ಪ್ರೀತಿಯನ್ನು ತೋರಿಸಲಾರದೆ ನಿರ್ಲಕ್ಷಿಸುವವುದರ ಬಗೆಗೆ ತೀವ್ರವಾದ ವಿಷಾದ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.
ನೇಗಿಲು ಹೂಡೋ ನನ್ನೊಳಗೆ ನೀನು ಹದವಾದ ಮಣ್ಣಿನ್ಹಂಗ
ನೆಲಕ್ಕುರುಳೋ ಎಲೆಗಳ ದನಿಯಲಿ ಹೊಸ ಚಿಗುರಿನ ನೆಲೆಯ್ಹಂಗ ಎಂಬ ಬದುಕಿನ ಭರವಸೆಯನ್ನು ನೆಲದ ಎಲೆಗಳ ದನಿಯಲ್ಲಿಯೆ ಕಾಣುತ್ತಾನೆ. `ಮಗುವಾಗಿದೆ ಮಣ್ಣು,’ `ಬೆದೆಗೆ ಬಿದ್ದ ರಾತ್ರಿ,’ `ನೆಲದ ಮಾತಾಗಿ ಉಳಿದವು,’ `ಪಾದಗಳು ಚಿತ್ರಿಸಿದ ಹೊಸ್ತಿಲು,’ `ಎಳೆ ರೆಕ್ಕೆಗಳ ಬಿಂಬ,’ `ಬೆವರಿಗೆ ದನಿಯಾದ ಬುತ್ತಿ’ ಇವು ಒಳ್ಳೆಯ ಕವಿಯಾಗುವ ಭರವಸೆಯನ್ನು ಮೂಡಿಸುವ ರಚನೆಗಳು.
ಗಜಲ್ ರಚನೆಗಳಿಗಿಂತಲೂ ಕವಿತೆಗಳ ರಚನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರೆ ಕನ್ನಡಕ್ಕೆ ಒಬ್ಬ ಒಳ್ಳೆಯ ಕವಿ ದಕ್ಕುತ್ತಾನೆ. ಉರ್ದು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡದೆ ಗಜಲ್‍ಗಳಿಗೆ ಮೊರೆ ಹೋದರೆ ಅದರಲ್ಲಿ ತಾಂತ್ರಿಕ ಅಂಶ ಇರುತ್ತದೆ ಹೊರತು ಜೀವ ಇರುವದಿಲ್ಲ.
ಕೃತಿ; ಅಲೆವ ನದಿ, ಬೆಲೆ- ರೂ. 80
ಕರ್ತೃ;ಕಿರಸೂರು ಗಿರಿಯಪ್ಪ (ಮೊ;8105789007)
