ಕೊಟ್ಟೂರು:ಡಾ.ವಿಷ್ಣುವರ್ಧನ್ ಜನ್ಮದಿನಕ್ಕೆ ಪುಸ್ತಕ ವಿತರಣೆ

ಕೊಟ್ಟೂರು: ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಜೀವನ ಆದರ್ಶ ಇತರರಿಗೂ ಮಾದರಿಯಾಗಿದೆ ಎಂದು ಕಾನಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರು ಹೇಳಿದರು.
ಕೊಟ್ಟೂರು ತಾಲ್ಲೂಕಿನ ನಿಂಬಳಗೇರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ.ವಿಷ್ಣುವರ್ಧನ್ ಅವರ 71 ನೇ ಜನ್ಮ ದಿನದ ಅಂಗವಾಗಿ‌ ವಿಷ್ಣು ಸೇನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು –ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ.ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದರು.
ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗಡ್ಡೇರ ರವಿಕುಮಾರ್ ಮಾತನಾಡಿ, ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್. ಆ ಮೇರು ನಟನ ಆದರ್ಶಮಯ ಜೀವನ ಮಾದರಿ. ಸದಾಕಾಲವೂ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು. ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದರು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಪಾಲಕ್ಷ, ಸದಸ್ಯ ಮುನೀರ್ ಭಾಷಾ, ಮುಖ್ಯಶಿಕ್ಷಕ ಪಕೀರಪ್ಪ, ಪೊಲೀಸ್ ಕಾನ್ಸ್‌ಟೇಬಲ್ ಕಲ್ಲೇಶ್,ಶಿಕ್ಷಕರಾದ ಶರ್ಮದ್ ಕಣದ ಮನಿ, ಪತ್ರೇಶ್, ಸಮಿತಿಯ ಸದಸ್ಯರಾದ ಬಿ.ಎಂ.ಪ್ರಸನ್ನ ಕುಮಾರ್, ಅನ್ವರ್ ಸಾಹೇಬ್, ಪ್ರವೀಣ್ ಕೋಟೆ, ನಟರಾಜ್, ವಿನಯ್ ಕುಮಾರ್, ಪೂನಂ ನಾಗರಾಜ, ದಾದು, ಅಜಯ್, ಗಿರೀಶ್ ಇದ್ದರು.