ಇತಿಹಾಸಕಾರರು ಸಂಶೋಧಕರು ಪೂರ್ವಗ್ರಹ ಮುಕ್ತ, ಸಮಚಿತ್ತದ ಸತ್ಯಾನ್ವೇಷಣಿಗಳು ಆಗಿರಬೇಕು – ಮುಕ್ಕಣ್ಣ ಕರಿಗಾರ

ಇತಿಹಾಸಕಾರರು ಸಂಶೋಧಕರು ಪೂರ್ವಗ್ರಹ ಮುಕ್ತ, ಸಮಚಿತ್ತದ ಸತ್ಯಾನ್ವೇಷಣಿಗಳು ಆಗಿರಬೇಕು – ಮುಕ್ಕಣ್ಣ ಕರಿಗಾರ

ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಕಡಿಮೆ,ಕಾಲಾನುಕ್ರಮವಾಗಿ ಇತಿಹಾಸವನ್ನು ದಾಖಲಿಸಲಿಲ್ಲ ಎನ್ನುವ ಸಾಮಾನ್ಯ ಆಕ್ಷೇಪ ಒಂದು ಉಂಟು.ಇದನ್ನೇ ನೆಪವಾಗಿರಿಸಿಕೊಂಡು ಭಾರತೀಯ ಇತಿಹಾಸವನ್ನು ಮನಸ್ಸಿಗೆ ಬಂದಂತೆ ಅರ್ಥೈಸಿ ಇತಿಹಾಸ ಎಂದು ಬರೆದವರ ಸಂಖ್ಯೆಗೇನೂ ಕಡಿಮೆ ಇಲ್ಲ.ಹಾಗಾಗಿ ಭಾರತದ ಇತಿಹಾಸವನ್ನು ಬರೆದವರು ಬರೆಯುತ್ತಿರುವವರಲ್ಲಿ ೧ ಪುರಾಣಗಳನ್ನೇ ಪ್ರಮಾಣವೆಂದು ಪುರಾಣಗಳ ಆಧಾರದಲ್ಲಿ ಇತಿಹಾಸಬರೆಯುವ ‘ಸಂಪ್ರದಾಯನಿಷ್ಠರು’ , ೨.ಕಾರ್ಲ್ ಮಾರ್ಕ್ಸ್ ನ ಐತಿಹಾಸಿಕ ಪದ್ಧತಿಯನ್ನನುಸರಿಸಿ ಭಾರತದ ಇತಿಹಾಸ ಬರೆಯುವ ‘ ಮಾರ್ಕ್ಸ್ ನಿಷ್ಠ ಇತಿಹಾಸಕಾರರು’ ಮತ್ತು ಪಾಶ್ಚಿಮಾತ್ಯ ಇತಿಹಾಸಕಾರರು ಬರೆದದ್ದನ್ನೆ ಉರುಹೊಡೆಯುವ ‘ ಪಶ್ಚಿಮದ ಬುದ್ಧಿಯ ಇತಿಹಾಸಕಾರರು’ ಎನ್ನುವ ಮೂರು ಬಗೆಯ ಇತಿಹಾಸಕಾರರು ಇದ್ದಾರೆ.ನಾಲ್ಕನೆಯ ಪ್ರಕಾರದ ಇತಿಹಾಸಕಾರರು,ಸಂಶೋಧಕರಾಗಿ ಸತ್ಯನಿಷ್ಠೆಯ ಇತಿಹಾಸಕಾರರು ಕೆಲವೇ ಸಂಖ್ಯೆಯಲ್ಲಿದ್ದಾರೆ.ಇಂತಹ ಕಡಿಮೆ ಸಂಖ್ಯೆಯ ಇತಿಹಾಸಕಾರರೇ ನಿಜವಾದ ಇತಿಹಾಸಕಾರರು.

ಭಾರತದ ಇತಿಹಾಸವೆಂದರೆ ಅದು ರಾಜ ಮಹಾರಾಜರುಗಳ ಆಳ್ವಿಕೆ,ವೈಭವದ ಚಿತ್ರಣ.ಅಲ್ಲಿ ಸಮಾಜ,ಜನಸಾಮಾನ್ಯರ ಬದುಕಿಗೆ ಮಹತ್ವ ಇಲ್ಲ.ಯಾಕೆಂದರೆ ಭಾರತೀಯ ಸಮಾಜವು ದೈವ ಮತ್ತು ಪ್ರಭುತ್ವವನ್ನು ಆರಾಧಿಸುತ್ತಲೇ ಬಂದ ಪರಿಣಾಮ ಅದೇ ಪರಂಪರೆಯಾಯಿತು,ಇತಿಹಾಸವಾಯಿತು.ವೇದ ಕಾಲದ ಋಷಿಗಳು ಜನಸಾಮಾನ್ಯರಾಗಿದ್ದರು.ಆದರೆ ಅವರ ಇತಿಹಾಸ ಬೇಕೆನ್ನಿಸಲಿಲ್ಲ ನಮ್ಮವರಿಗೆ‌.ಉಪನಿಷತ್ತುಗಳ ಕಾಲದ ಋಷಿಗಳು ಸತ್ಯಾನ್ವೇಷಿಗಳಾಗಿದ್ದರು.ಅವರ ಇತಿಹಾಸ ಮಹತ್ವದ್ದು ಆಗಿ ಕಾಣಲಿಲ್ಲ.ಆದರೆ ಪುರಾಣಗಳಲ್ಲಿ ಭಾರತದ ಇತಿಹಾಸವನ್ನು ಹುಡುಕಬಯಸುತ್ತಾರೆ.ಕಾರಣ ಸ್ಪಷ್ಟ, ಪುರಾಣಗಳ ಕಾಲಕ್ಕಾಗಲೇ ಪರೋಹಿತಶಾಹಿ ವ್ಯವಸ್ಥೆ ಪ್ರಭುತ್ವವನ್ನು ನಿಯಂತ್ರಿಸುವಷ್ಟು ಬಲಗೊಂಡಿತ್ತು.ಸ್ಮೃತಿ- ಸಂಹಿತೆ,ಪುರಾಣಗಳನ್ನು ಬರೆದ ಪುರೋಹಿತರು ‘ ಭೂಸುರರು’ ಆಗಿದ್ದರು.ಅವರು ಬರೆದ ಕಥೆ- ಪುರಾಣಗಳಲ್ಲಿ ಬ್ರಾಹ್ಮಣರನ್ನು ದ್ವೇಷಿಸುವುದು ಮಹಾಪರಾಧ ಆಗಿತ್ತು.ಸಮಾನತೆ,ಸ್ತ್ರೀ ಸ್ವಾತಂತ್ರ್ಯ,ಶೂದ್ರರು- ಕೆಳವರ್ಗದವರು ಎಲ್ಲರಂತೆ ಮನುಷ್ಯರೇ ಎನ್ನುವ ಮನುಷ್ಯತ್ವಕ್ಕೆ ಎಳ್ಳುನೀರು ಬಿಡಲಾಗಿತ್ತು.ಆಳರಸರು ಮತ್ತು ಪುರೋಹಿತರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದ ಕಾಲಘಟ್ಟ ಪುರಾಣಗಳ ಕಾಲದ್ದು.ಪುರಾಣಗಳನ್ನು ಆಧರಿಸಿ ಇತಿಹಾಸ ಬರೆಯುವವರು,ಭಾರತದ ಇತಿಹಾಸವನ್ನು ವೈಭವೀಕರಿಸುವವರು ಸರ್ವಸಮತೆಯನ್ನೊಪ್ಪದ,ಸರ್ವೋದಯ ತತ್ತ್ವ ವಿರೋಧಿ ‘ ಸನಾತನವಾದಿಗಳು’.ಇದಕ್ಕಿಂತ ಅಪಾಯಕಾರಿಯಾದದ್ದು ಮಾರ್ಕ್ಸ್ ಪ್ರಣೀತ ಇತಿಹಾಸ ಮತ್ತು ಮಾರ್ಕ್ಸ್ ವಾದಿ ಇತಿಹಾಸಕಾರರ ದೃಷ್ಟಿಕೋನ.ಆಹಾರೋತ್ಪಾದನೆ,ಆಹಾರದ ಉಳಿತಾಯದ ಆಧಾರದಲ್ಲಿ ಇತಿಹಾಸ ಬರೆಯುವ ಮಾರ್ಕ್ಸ್ ವಾದಿಗಳು ಶ್ರಮಿಕರು ಮತ್ತು ಶ್ರಮ ಸಂಸ್ಕೃತಿಗೆ ಗೌರವ ಕೊಡುತ್ತಾರೆ ಎನ್ನುವುದು ಒಂದನ್ನು ಬಿಟ್ಟರೆ ಅವರು ಹೇಳುವುದು ಇತಿಹಾಸವಲ್ಲ.ಪಾಶ್ಚಿಮಾತ್ಯ ಇತಿಹಾಸಕಾರರು ಭಾರತದ ಬಗ್ಗೆ ಸದಭಿಪ್ರಾಯ ಉಳ್ಳವರಲ್ಲ.ಅದರಲ್ಲೂ ಬ್ರಿಟಿಷ್ ವೈಸರಾಯಿಗಳು,ಗವರ್ನರ್ ಗಳು ಹೇಳಿ ಬರೆಯಿಸಿದ ಭಾರತದ ಇತಿಹಾಸವಂತೂ ಭಾರತೀಯರನ್ನು ಒಂದುಗೂಡಿ ಬಾಳಲು ಆಸ್ಪದ ನೀಡದಂತಹ ‘ ಒಡೆದು ಆಳುವಇತಿಹಾಸ’.ಅದೇ ಮಾದರಿಯಲ್ಲಿ ಬರೆಯುವ ಭಾರತೀಯ ಇತಿಹಾಸಕಾರರು ಹೆಸರಿಗಷ್ಟೇ ಭಾರತೀಯರು.ಅವರ ಅಧ್ಯಯನ,ಅನ್ವೇಷಣಾ ಪ್ರವೃತ್ತಿಗಳೆಲ್ಲ ಪಾಶ್ಚಿಮಾತ್ಯರ ಅನುಕರಣೆ.ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಸತ್ಯನಿಷ್ಠರ ಇತಿಹಾಸ ಹಿಡಿಸದು ಬಹಳ ಮಂದಿಗೆ.ಹೀಗಿರುವಾಗ ಯಾವುದು ಭಾರತದ ನಿಜವಾದ ಇತಿಹಾಸ? ಈ ಪ್ರಶ್ನೆಯನ್ನು ಇಟ್ಟುಕೊಂಡು ಇತಿಹಾಸದ ವಿಧ್ಯಾರ್ಥಿ- ಸಂಶೋಧಕರು ಮುಂದುವರೆಯಬೇಕು.

ಕರ್ನಾಟಕದಲ್ಲೂ ಹಲವಾರು ಜನ ವಿದ್ವಾಂಸರು,ಸಂಶೋಧಕರು ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಪ್ರಯತ್ನಿಸುತ್ತಿದ್ದಾರೆ.ಅವರ ಪ್ರಯತ್ನ ಶ್ಲಾಘನೀಯ,ಅಭಿನಂದನೀಯ.ಆದರೆ ಅವರು ಕಟ್ಟಿಕೊಟ್ಟ ಇತಿಹಾಸ ವಸ್ತುನಿಷ್ಠವಾದುದೆ?ಸತ್ಯವಾದುದೆ? ಎನ್ನುವ ಪ್ರಶ್ನೆಗಳೇಳುತ್ತವೆ.ಶಾಸನಗಳು ಇತಿಹಾಸದ ಅಧ್ಯಯನದ ಮಹತ್ವದ ದಾಖಲೆಗಳು ನಿಜ.ಆದರೆ ಆ ಶಾಸನಗಳನ್ನು ಅರ್ಥೈಸುವಲ್ಲಿ ಇತಿಹಾಸಕಾರನ ಬುದ್ಧಿ ಎಷ್ಟು ಪಕ್ವವಾಗಿದೆ,ಮಾಗಿದೆ ಎನ್ನುವುದರ ಮೇಲೆ ಇತಿಹಾಸದ ಪಕ್ವತೆ ಮತ್ತು ಪರಿಪೂರ್ಣತೆಯನ್ನು ನಿರ್ಧರಿಸಬಹುದು.ಶಾಸನಗಳಲ್ಲಿ ಪ್ರಾಕೃತ,ಬ್ರಾಹ್ಮಿ,ಸಂಸ್ಕೃತ,ಹಳಗನ್ನಡ ಮತ್ತು ನಡುಗನ್ನಡ ಭಾಷೆಗಳಲ್ಲಿ ರಚಿಸಿದ ಶಾಸನಗಳಿವೆ.ಪ್ರಾಕೃತ,ಬ್ರಾಹ್ಮಿ ಭಾಷೆಗಳಲ್ಲಿ ಬರೆಯಲ್ಪಟ್ಟ ಶಾಸನಗಳಲ್ಲಿ ನಿಖರ ಮಾಹಿತಿಗಿಂತ ಇತಿಹಾಸಕಾರನ ಕಲ್ಪನೆ ಹೆಚ್ಚು ಕೆಲಸ ಮಾಡಿರುತ್ತದೆ.ಪ್ರಾಕೃತ ಮತ್ತು ಬ್ರಾಹ್ಮಿ ಲಿಪಿಯ ಶಾಸನಗಳನ್ನು ಓದುವ ಶಾಸ್ತ್ರಪದ್ಧತಿ ಬೆಳೆದು ಬಂದಿದೆಯಾದರೂ ಆ ಪದಗಳು ಹೊರಹೊಮ್ಮಿಸುವ ಅರ್ಥ ಇದೇ ಎಂದು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ.ಭಾಷೆಯೊಂದು ಬೆಳೆಯುತ್ತ ಬಂದ ಹಾಗೆ ಅದರ ಹಳೆಯ ರೂಪಗಳು ಮರೆಯಾಗಿ,ಹೊಸ ರೂಪಗಳು,ಹೊಸ ಸಾಹಿತ್ಯ,ಹೊಸಹೊಸ ಪದಗಳು ಸೇರಿಕೊಂಡಿರುತ್ತವೆ.ಇಂದಿನ ನಮಗೆ ಬಹುಪೂರ್ವಕಾಲದ ಆ ಕಾಲಘಟ್ಟದಲ್ಲಿ ಒಂದು ಪದಕ್ಕಿದ್ದ ನಿಖರ ಅರ್ಥ ಇದುವೆ ಎಂದು ನಿರ್ಧರಿಸಲಾಗದು.ಇಲ್ಲಿ ಸಂಶೋಧಕರ ಊಹೆ ಹೆಚ್ಚು ಕೆಲಸ ಮಾಡುತ್ತದೆ ಎಂದು ಒತ್ತಿ ಹೇಳಬೇಕಿಲ್ಲ.ಒಂದು ಶಾಸನವನ್ನು ಹಲವು ಶಾಸನತಜ್ಞರು ಹಲವು ರೀತಿಗಳಲ್ಲಿ ಅರ್ಥೈಸಲು ಸಾಧ್ಯತೆಗಳಿವೆ.

ವಸ್ತುಸ್ಥಿತಿ ಹೀಗಿರುವಾಗ ನಿಜವಾದ ಇತಿಹಾಸಕಾರ- ಸಂಶೋಧಕ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗುತ್ತದೆ .ಇತಿಹಾಸಕಾರರು,ಸಂಶೋಧಕರು ಬರೆದದ್ದನ್ನು ಜನರು ಒಪ್ಪುತ್ತಾರೆ.ಆದ್ದರಿಂದ ಪ್ರತಿಯೊಬ್ಬ ಇತಿಹಾಸಕಾರ,ಸಂಶೋಧಕ ಸತ್ಯನಿಷ್ಠನಾಗಿರುವುದು ಮೊದಲ ಅರ್ಹತೆ.ವ್ಯಕ್ತಿನಿಷ್ಠೆ,ಮತ- ಧರ್ಮಗಳ ನಿಷ್ಠೆಗಳಲ್ಲಿ ಇತಿಹಾಸ ಹುಡುಕಹೊರಡುವವರು ಇತಿಹಾಸಕ್ಕೆ ದ್ರೋಹಬಗೆಯುತ್ತಾರೆ.ಇತಿಹಾಸಕಾರ ಎಲ್ಲ ಬಗೆಯ ಪೂರ್ವಗ್ರಹಗಳಿಂದ ಮುಕ್ತನಾಗಿರಬೇಕು; ರಾಗ- ದ್ವೇಷಗಳಿಗೆ ಅತೀತನಾಗಿರಬೇಕು.ತೀಕ್ಷ್ಣವಾದ ಬುದ್ಧಿ,ಪ್ರಬುದ್ಧ ಆಲೋಚನೆಗಳನ್ನು ಹೊಂದಿದವನಾಗಿರಬೇಕು.ಸತ್ಯವನ್ನು ಹುಡುಕುವ ಹಂಬಲ ಇರಬೇಕೇ ಹೊರತು ಸಂಶೋಧಕನಲ್ಲಿ ತನ್ನ ಅಜೆಂಡಾವನ್ನು ಪ್ರತಿಷ್ಠಾಪಿಸುವ ಕೀಳುವಾಂಛೆ ಇರಬಾರದು.ಜಾತಿ,ಪ್ರದೇಶ,ಜನಾಂಗಗಳ ಮೋಹ ಪ್ರೀತಿಗಳು ಇತಿಹಾಸಕಾರನಲ್ಲಿ ಸುಳಿಯಬಾರದು.ಒಬ್ಬರು ಬರೆದದ್ದನ್ನು ಒಪ್ಪದೆ ಇದ್ದರೆ ಅದಕ್ಕೆ ಸರಿಯಾದ ಸಮರ್ಥನೆ ನೀಡಿ ಅಲ್ಲಗಳೆಯಬೇಕು.ಬರಿ ಟೀಕೆ,ಖಂಡನೆಗಳಿಂದ ವಿಷಯ ಮಂಡಿಸಬಾರದು.ವಯಸ್ಸು ಆದ ಮಾತ್ರಕ್ಕೆ ಸಂಶೋಧನೆಗೆ ಪಕ್ವತೆ ಬಾರದು; ಆಳವಾದ ಅಧ್ಯಯನ,ತಲಸ್ಪರ್ಶಿಯಾದ ಚಿಂತನೆ,ಸತ್ಯದ ಮಿಂಚಿನಲ್ಲಿ ಅನ್ವೇಷಣಾ ಪ್ರವೃತ್ತಿ ಉಳ್ಳವರೇ ನಿಜವಾದ ಇತಿಹಾಸಕಾರರು.ಮತನಿಷ್ಠೆ- ಜನಾಂಗನಿಷ್ಠೆಯ ಒಳತೋಟಿಗಳನ್ನಿಟ್ಟುಕೊಂಡು ಕಲ್ಪನಾಲೋಕದಲ್ಲಿ ವಿಹರಿಸಿ,ಕಪೋಲಕಲ್ಪಿತ ಕಥೆಗಳನ್ನು ಪ್ರಸ್ತಾಪಿಸುವವರು ನಿಜವಾದ ಇತಿಹಾಸಕಾರರಲ್ಲ,ನಿಜವಾದ ಸಂಶೋಧಕರೂ ಅಲ್ಲ.ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಾಸಕ್ತಿಯ ಕೊರತೆ ಮತ್ತು ಐತಿಹಾಸಿಕ ಪ್ರಜ್ಞೆಯ ಕೊರತೆ ಇರುವಲ್ಲಿ ಇಂತಹ ‘ ಅಪ್ರಬುದ್ಧ ಇತಿಹಾಸಕಾರರೇ’ ಮಹಾನ್ ಇತಿಹಾಸಕಾರರಾಗುತ್ತಾರೆ ಎನ್ನುವುದು ವಿಷಾದದ,ವಿಪರ್ಯಾಸದ ಸಂಗತಿ.ಅಪ್ರಬುದ್ಧರು ಬರೆದದ್ದನ್ನು ಇತಿಹಾಸ ಎಂದು ಒಪ್ಪಿಕೊಳ್ಳುವ ಬದಲು ‘ ಅದು ಎಷ್ಟು ಸರಿ?’ ಎಂದು ಪ್ರಶ್ನೆ ಮಾಡುತ್ತಲೇ ಹೋಗುವುದು ಮತ್ತು ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರಲ್ಲೇ ಸತ್ಯಾನ್ವೇಷಕರ ಆನಂದವಡಗಿದೆ.ಅಂತಹ ಪ್ರಶ್ನೆಗಳನ್ನುಳ್ಳ ಸತ್ಯಾನ್ವೇಷಕರು ಆಗಬೇಕು ನಾವು- ನೀವು ಭಾರತದ ನಿಜ ಇತಿಹಾಸ ರಚಿಸಬೇಕು ಎಂದರೆ.

18.09.2021