ಶಿಕ್ಷಕಿಯರ ದಾರಿದೀಪ: ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ

ಸಿಂಧನೂರಿನಲ್ಲಿ ಸೆ.19 ರಂದು ಶ್ರೀ ಶಂಕರ್‌ ದೇವರು ಹಿರೇಮಠ ಅವರು ರಚಿಸಿದ ಕೃತಿ ʻಮಕ್ಕಳ ಬಾಳಿನ ಬೆಳಕು: ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆʼ ಕೃತಿ ಲೋಕಾರ್ಪಣೆಯಾಗಲಿದೆ. ಆ ಕುರಿತು ಈ ಬರಹ.
ಶಿಕ್ಷಕಿಯರ ದಾರಿದೀಪ: ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ

ಲೇಖಕರು: ಮಂಡಲಗಿರಿ ಪ್ರಸನ್ನ

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ದೇವರು ಹಿರೇಮಠ ರಚಿಸಿದ `ಮಕ್ಕಳ ಬಾಳಿನ ಬೆಳಕು ಅಕ್ಷರ ಜ್ಯೋತಿ: ಸಾವಿತ್ರಿ ಬಾಯಿ ಫುಲೆ’ ಕೃತಿ ಸೆ. 19 ರಂದು ಸಿಂಧನೂರಿನಲ್ಲಿ ಲೋಕಾರ್ಪಣೆಯಾಗಲಿದೆ. `ಮಕ್ಕಳ ಶಿಕ್ಷಣ’ ಕುರಿತು ಚಿಂತನೆ ಮಾಡುವ ಮೊದಲು ಮಕ್ಕಳು, ಪಾಲಕರು, ಪೋಷಕರು, ಶಿಕ್ಷಕರಾದಿಯಾಗಿ ಎಲ್ಲರೂ ಒಮ್ಮೆ ಸಾವಿತ್ರಿ ಬಾಯಿ ಫುಲೆ ಅವರ ಬದುಕನ್ನು ಅರ್ಥೈಸುವ ಪ್ರಯತ್ನವಾಗಿ ಈ ಕೃತಿ ರಚನೆಗೊಂಡಂತಿದೆ. ಮಕ್ಕಳ ಸಾಹಿತ್ಯ ಮಾಲಿಕೆಯ ಸರಣಿಯಲ್ಲಿ ಪ್ರಕಟಿಸಲು ಯೋಚಿಸಿರುವ ಶಂಕರ ದೇವರು ಹಿರೇಮಠರ ಈ ಕೃತಿ ಮಹತ್ವದ್ದು. ಮಕ್ಕಳನ್ನೆ ಉದ್ದೇಶಿಸಿ ಈ ಕೃತಿ ರಚನೆಯಾಗಿದ್ದರು, ಶಿಕ್ಷಣ ಕ್ಷೇತ್ರದಲ್ಲಿ ದಿನವೂ ಹತ್ತಾರು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಶಿಕ್ಷಕರಿಗೂ ಈ ಕೃತಿ ಮುಖ್ಯ ಎನಿಸುತ್ತದೆ. ಶಂಕರ ದೇವರು ಹಿರೇಮಠರ ಈ ಕೃತಿಯಲ್ಲಿ ಮುಖ್ಯವಾಗಿ ೧೬ ಅಧ್ಯಾಯಗಳಿವೆ, ಉಳಿದಂತೆ ಕೆಲ ಕವಿತೆಗಳಿವೆ. ವಿವಿಧ ಗ್ರಂಥಗಳ ಅಧ್ಯಯನದ ಮೂಲಕ ಇಲ್ಲಿನ ವಿಷಯ ಸಂಗ್ರಹ, ವೈವಿಧ್ಯಮಯ ಮಾಹಿತಿ ಚಿಂತನಾರ್ಹವಾಗಿದೆ. ಸಂಗ್ರಹಿಸಿದ ವಿಷಯ ಕುರಿತು ಗ್ರಂಥ ಋಣದಲ್ಲಿ ಶಂಕರ ದೇವರು ಹಿರೇಮಠ ವಿವರ ನೀಡಿದ್ದಾರೆ. ಬರಹಗಾರರಾಗಿ, ಬೇರೆ ಬೇರೆ ಸ್ಥರಗಳಲ್ಲಿ ಅಧ್ಯಯನ ಮಾಡಿರುವ ಡಾ.ಎಸ್.ಶಿವಯ್ಯ, ಎಸ್.ವಿ.ಮಾದವಾಡ, ಕೆ.ಎನ್.ಅಶ್ವತ್ಥಪ್ಪ, ಡಾ.ಸರಜೂ ಕಾಟ್ಕರ್, ಡಾ.ಎಚ್.ಎಸ್.ಅನುಪಮಾ ಅವರಂತಹ ಲೇಖಕರಿದ್ದು ಅವರ ಗ್ರಂಥಗಳನ್ನು ಪರಾಮರ್ಶೆ ಮಾಡಿ ಶಂಕರ ದೇವರು ಹಿರೇಮಠ ತಮ್ಮದೇ ಶೈಲಿಯಲ್ಲಿ `ಸಾವಿತ್ರಿ ಬಾಯಿ ಫುಲೆ’ ಅವರ ಜೀವನ, ಬದುಕು, ಹೋರಾಟ, ಶಿಕ್ಷಣ ಕ್ರಾಂತಿ ಮುಂತಾದ ವಿಷಯಗಳನ್ನು ತುಂಬಾ ಸರಳೀಕರಣಗೊಳಿಸಿ ಚೊಕ್ಕವಾಗಿ ಪೋಣಿಸಿಕೊಟ್ಟಿದ್ದಾರೆ. ಅಕ್ಷರ ಮತ್ತು ಶಿಕ್ಷಣದ ಮಹತ್ವ ಕುರಿತ ಅಧ್ಯಾಯ-೧ ರಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ವಸಾಹತುಶಾಹಿ ಇಂಗ್ಲೀಷರ ಆಗಮನದಿಂದ ಭಾರತದಲ್ಲಿ ಆದ ಶಿಕ್ಷಣ ಕ್ರಾಂತಿ ಹೇಗೆ ಮಹಿಳೆಯರಿಗೂ, ಶೋಷಿತ ಸಮುದಾಯಕ್ಕೂ ನಿಲುಕುವುದು ಸಾಧ್ಯವಾಯಿತು ಎಂಬುದರ ಬಗ್ಗೆ ವಿವರಿಸಿದ್ದಾರೆ. ಈ ಆರಂಭದ ಅಧ್ಯಾಯದಲ್ಲಿ ಶಂಕರ ದೇವರು, ಶಿಕ್ಷಣದ ಮೌಲ್ಯಯುತ ಮಾತುಗಳ ಕುರಿತು ಗೌತಮ ಬುದ್ಧ, ಅರವಿಂದ ಘೋಷ, ಸ್ವಾಮಿ ವಿವೇಕಾನಂದ, ಗಾಂಧೀಜಿ ಹಾಗೂ ರೋಸೋ ಅವರುಗಳು ಶಿಕ್ಷಣದ ಪ್ರಾಮುಖ್ಯತೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳಿವೆ. ಅಧ್ಯಾಯ ೨, ೩, ೪, ೫ ರಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ, ವೈವಾಹಿಕ ಜೀವನ, ಅವರು ಪಡೆದ ಶಿಕ್ಷಣ ಕುರಿತು ಬಹುಮುಖ್ಯ ಅಂಶಗಳನ್ನು ಒದಗಿಸಿರುವುದು ಓದುಗರಿಗೆ ಪ್ರೇರಣೆ ನೀಡುವಂತಹುದು. ಸಾವಿತ್ರಿ ಬಾಯಿ ಫುಲೆ ಅವರಿಗೆ ಪತಿಯಾಗಿ ಬಂದ ಜ್ಯೋತಿಬಾ ಫುಲೆ ಕೇವಲ ಪತಿಯಾಗದೆ ಗೆಳೆಯ, ಶಿಕ್ಷಕ, ಮಾರ್ಗದರ್ಶಕರಾಗಿ ಬಂದದ್ದು ಸಾವಿತ್ರಿಬಾಯಿ ಫುಲೆ ಅಂತಹ ಮಹಿಳೆಯೊಬ್ಬರ ಜೀವನದಲ್ಲಿ ಸಿಕ್ಕ ಬಹುದೊಡ್ಡ ತಿರುವು. ಮಹಿಳೆಯರ ಶಿಕ್ಷಣ ಅಪರಾಧ ಎನ್ನುವ ಸ್ಥಿತಿಯ ಕಾಲದಲ್ಲಿ ಸಾವಿತ್ರಿ ಬಾಯಿ ಫುಲೆ, ಪತಿಗೆ ಸ್ಪಂದಿಸಿ ಹೊಸ ಆಲೋಚನೆಗಳ ಮೂಲಕ ಸಮುದ್ರದ ವಿರುದ್ಧ ಈಜಾಡಿದ್ದು ಸಣ್ಣ ನಿರ್ಧಾರವೇನಲ್ಲ. ಅದರಲ್ಲಿ ಕಷ್ಟ ಉಂಡರೂ ಯಶಸ್ವಿಯಾದರು!
ಅಧ್ಯಾಯ ೬ ರಲ್ಲಿ ಸಾವಿತ್ರಿ ಬಾಯಿ ಫುಲೆ, ದೇಶದ ಮೊದಲ ಶಿಕ್ಷಕಿಯಾಗಿ ರೂಪುಗೊಂಡದ್ದು ಮತ್ತೊಂದು ಕ್ರಾಂತಿಕಾರಕ ಬದಲಾವಣೆ. ಆ ಮೂಲಕ ಅವರು ಅಸ್ಪೃಷ್ಯ, ತಳ ಸಮುದಾಯದ, ಮಾತ್ರವಲ್ಲ ಮೇಲ್ಜಾತಿಯ ಮಹಿಳೆಯರಲ್ಲೂ ಅಕ್ಷರ ಕಲಿಯಲಾರದ ಮನಸ್ಥಿತಿಯ ಮನಸುಗಳಿಗೆ ಹೊಸ ಭರವಸೆ ಮತ್ತು ಬೆಳಕು ಮೂಡಿಸಿದರು. ಅಧ್ಯಾಯ ೭, ೮, ೯, ೧೦, ರಲ್ಲಿ ಸಾವಿತ್ರಿಬಾಯಿ ಫುಲೆ, ಶಿಕ್ಷಕಿಯಾಗಿ ವೃತ್ತ ಜೀವನ ಆರಂಭಿಸಿ, ಮಕ್ಕಳಿಗೆ ಮತ್ತು ತುಳಿತಕ್ಕೊಳಗಾದ ಮಹಿಳೆಯರಿಗೆ ಶಿಕ್ಷಣದ ಮಹತ್ವ ಸಾರಿದ್ದು, ಮತ್ತಿತರ ವಿವರಗಳಿವೆ. ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಎದುರಿಸಿದ ಸಾಮಾಜಿಕ ಸಂಕಷ್ಟಗಳು, ಮಾನಸಿಕ ಹಿಂಸೆಗಳು…. ಹೀಗೆ ಏನೆಲ್ಲ ಎದುರಾದರೂ ಅವೆಲ್ಲವನ್ನು ಮಟ್ಟಹಾಕಿ ಶಿಕ್ಷಣಕ್ಕೆ ಮಹತ್ವ ನೀಡಿ ಒತ್ತಾಸೆಯಾಗಿ ನಿಂತುದರ ಫಲವೆ, ಇಂದು ಕೋಟಿ ಕೋಟಿ ಮಕ್ಕಳ, ಮಹಿಳೆಯರ ಎದೆಯಲ್ಲಿ ಅಕ್ಷರದ ಬೀಜ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದ್ದು, ಬಹುದೊಡ್ಡ ಸಾಧನೆ. ಅಧ್ಯಾಯ ೧೧-೧೬ ರಲ್ಲಿ ಶಿಕ್ಷಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕವಾಗಿ ಕ್ರಿಯಾಶೀಲರಾಗುವ ಮೂಲಕ ಸಾವಿತ್ರಿಬಾಯಿ ಫುಲೆ, ಜೀವನದ ಮತ್ತೊಂದು ಮಗ್ಗುಲಿಗೂ ಹೊಸ ಬೆಳಕು ಮೂಡಿಸುವ ಚಿತ್ರಣವಿದೆ. ಮೂಢನಂಬಿಕೆ, ಕಂದಾಚಾರಗಳು, ಮುಂದುವರೆದ ಸಮಾಜದಲ್ಲೂ ಇದ್ದ ಅನಿಷ್ಟ ಪದ್ಧತಿಗಳು, ದುಂದುವೆಚ್ಚದ ಮದುವೆ…ಹೀಗೆ ಹತ್ತು ಹಲವು ವಿಷಯ ಕುರಿತಂತೆ ಅವರ ಕ್ರಿಯಾಶೀಲ ಮನಸು ಸಮಾಜ ಮುಖಿಯಾಗಿ, ಸುಧಾರಣೆಯತ್ತ ಬೆಳಕು ಚೆಲ್ಲುತ್ತದೆ. ಇಂತಹ ದುರಿತ ಸಂದರ್ಭದಲ್ಲೆ, ಸ್ವತಃ ಉತ್ತಮ ಬರಹಗಾರ್ತಿಯಾಗಿ, ಕವಯಿತ್ರಿಯಾಗಿ ರೂಪುಗೊಳ್ಳುವ ಸಾವಿತ್ರಿಬಾಯಿ ಫುಲೆ, ತಮ್ಮ ಕಾವ್ಯದ ಮೂಲಕ ಸಮಾಜದ ಅಂಕುಡೊಂಕು, ಸತ್ಯ-ಅಸತ್ಯಗಳ, ಮಹಿಳೆಯ ನೋವಿನ ಹಲವು ಮುಖಗಳ ಕಡೆ ಚಿಂತಿಸಿ, ಸುಧಾರಣೆ ವಿಷಯ ಕುರಿತು ಕಾವ್ಯ ರಚಿಸಿ ಶೋಷಿತ ವರ್ಗದ ಜನಕ್ಕೆ ಹೊಸ ಕಣ್ಣು ಹಚ್ಚಲು ಪ್ರಯತ್ನಿಸುತ್ತಾರೆ.
ಸಾವಿತ್ರಿಬಾಯಿ ಫುಲೆ, ಬದುಕಿದ್ದು ಸುಮಾರು ೬೬ ವರ್ಷವಷ್ಟೇ, ಆದರೆ ಅವರ ಸಾಧನೆ ಬೆಟ್ಟದಷ್ಟು, ಆಗಸದಷ್ಟು ವಿಶಾಲ. ಕೇವಲ ಸಂಬಳಕ್ಕಾಗಿ ಒಬ್ಬ ಶಿಕ್ಷಕಿಯಾಗಿ ರೂಪುಗೊಳದೆ, ವೈಚಾರಿಕ ಚಿಂತನೆಯ ಉದಾತ್ತ ವಿಚಾರದ ಚಿಂತಕಿಯಾಗಿ ಭಾರತದ ಶೋಷಿತ ಸಮುದಾಯದ, ಅಕ್ಷರವಂಚಿತ ಮಕ್ಕಳು ಮತ್ತು ಮಹಿಳೆಯರ ಆಶಾಕಿರಣವಾಗಿ, ಅವರಿಗೆ ಶಿಕ್ಷಣ ದಕ್ಕುವ ನಿಟ್ಟಿನಲ್ಲಿ ಶ್ರಮಿಸಿಸಿದ್ದು ಮಾತ್ರವಲ್ಲ, ಶೋಷಿತ ಜೀವಗಳಲ್ಲಿ ಹೊಸದೊಂದು ಚಿಂತನೆ ಮತ್ತು ಸಂಚಲನ ಮೂಡಿಸಿದ ತಾಯಿ ಹೃದಯಿ. ಹಾಗಾಗಿ ಸಾವಿತ್ರಿಬಾಯಿ ಫುಲೆ ಅವರಿಗೆ ಇಂದಿನ ಎಲ್ಲ ವರ್ಗದ ಮಕ್ಕಳು ಮತ್ತು ಶಿಕ್ಷಕರು, ಮಹಿಳೆಯರು ಕೃತಜ್ಞರಾಗಿರಬೇಕು. ಸಾವಿತ್ರಿಬಾಯಿ ಫುಲೆ ಹುಟ್ಟಿಬರದಿದ್ದರೆ ಬಹುಃಷ ಶೋಷಿತ ವರ್ಗ ಅಕ್ಷರ ಬೆಳಕಿಲ್ಲದೆ ಅಂಧಕಾರದಲ್ಲೇ ಉಳಿಯುವಂತೆ ಆಗುತ್ತಿತೋ ಏನೋ ಗೊತ್ತಿಲ್ಲ. ಈ ಕಾರಣದಿಂದಾಗಿಯೆ, ಆಧುನಿಕ ಜಗತ್ತಿನ ಪ್ರತಿಯೊಬ್ಬರ ಎದೆಗೆ ಅಕ್ಷರ ಬೀಜ ಬಿತ್ತುವ ಮಹತ್ವದ ಕೈಂಕರ್ಯವನ್ನು ದಶಕಗಳ ಹಿಂದೆಯೆ ಕೈಗೆತ್ತಿಕೊಂಡು, ಆ ಮೂಲಕ ಮಾದರಿಯಾದ ಸಾವಿತ್ರಿಬಾಯಿ ಫುಲೆ ಅವರಂತಹ ಮಹಿಳೆಯ ಗುಣಗಳ ಕೆಲವು ಅಂಶಗಳನ್ನಾದರೂ ನಾವು ಮೈಗೂಡಿಸಿಕೊಂಡಲ್ಲಿ ಅದುವೆ ಈ ಧೀರ ಮಹಿಳೆಗೆ ನಾವು ನೀಡಬಹುದಾದ ಬಹುದೊಡ್ಡ ಗೌರವ. ಇಂತಹ ಅಪೂರ್ವ ಮಹಿಳೆ ಕುರಿತು ಅರ್ಥಪೂರ್ಣ ಕೃತಿ ರಚಿಸಿರುವ ಗೆಳೆಯ ಶಂಕರ ದೇವರು ಹಿರೇಮಠ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.